ನೇಪಾಳ, ಡಿ 20 (DaijiworldNews/DB): ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಉತ್ಪನ್ನಗಳ ತಯಾರಿಕಾ ಕಂಪೆನಿ ದಿವ್ಯ ಫಾರ್ಮಸಿ ಸೇರಿದಂತೆ ಭಾರತದ 16 ಔಷಧೀಯ ಕಂಪನಿಗಳಿಂದ ಔಷಧಗಳ ಆಮದಿಗೆ ನೇಪಾಳ ನಿಷೇಧ ಹೇರಿದೆ.
ನೇಪಾಳದ ಔಷಧ ಆಡಳಿತ ವಿಭಾಗವು ಭಾರತದ 16 ಔಷಧೀಯ ಕಂಪನಿಗಳಿಂದ ಔಷಧ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಉತ್ಪಾದನಾ ಗುಣಮಟ್ಟವನ್ನು ಅನುಸರಿಸುವಲ್ಲಿ ಈ ಕಂಪೆನಿಗಳು ವಿಫಲವಾಗಿರುವುದರಿಂದ ಈ ನಿಷೇಧ ಹೇರಿಕೆ ಮಾಡಲಾಗಿದೆ ಎಂದು ವಿಭಾಗದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಬಯಸಿದ್ದ ಹಲವು ಔಷಧೀಯ ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ಉತ್ಪಾದನಾ ಅಭ್ಯಾಸಗಳನ್ನು ಅನುಸರಿಸದ ಕಂಪೆನಿಗಳಿಂದ ನಾವು ಔಷಧ ಖರೀದಿಸುವುದಿಲ್ಲ. ಅಂತಹ ಕಂಪೆನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಇಲಾಖೆಯ ವಕ್ತಾರ ಸಂತೋಷ್ ಕೆ.ಸಿ. ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಅರ್ಜಿ ಸಲ್ಲಿಸಿದ್ದ ಕಂಪೆನಿಗಳ ಔಷಧೀಯ ಉತ್ಪಾದನಾ ಸೌಲಭ್ಯ ಪರಿಶೀಲನೆಗೆ ಡ್ರಗ್ ಇನ್ಸ್ಪೆಕ್ಟರ್ಗಳ ತಂಡವನ್ನು ಭಾರತಕ್ಕೆ ನೇಪಾಳ ಕಳುಹಿಸಿತ್ತು.
ನಿಯಂತ್ರಕ ಅವಶ್ಯಕತೆ ಅನುಸರಿಸದ, ಉತ್ಪಾದನಾ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳದ, ನಿರ್ಣಾಯಕ ಆರೈಕೆ, ದಂತ ಕಾರ್ಟ್ರಜ್ಗಳನ್ನು ಲಸಿಕೆಗಳಲ್ಲಿ ಬಳಸುವ ಕಂಪೆನಿಗಳ ಔಷಧಗಳಿಗೆ ನೇಪಾಳ ನಿಷೇಧ ಹೇರಿದೆ ಎನ್ನಲಾಗಿದೆ.