ನೇಪಾಳ, ಡಿ 21 (DaijiworldNews/SM): ವಯಸ್ಸಿನ ಮಾನದಂಢವನ್ನಿರಿಸಿ ಸರಣಿ ಹಂತಕನೋರ್ವನಿಗೆ ಜೀವದಾನ ಸಿಕ್ಕಿದ್ದು, 19 ವರ್ಷಗಳ ಬಳಿಕ ಬಿಡುಗಡೆ ಭಾಗ್ಯ ಲಭಿಸಿದೆ. ನೇಪಾಳ (Nepal) ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದ್ದು, ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ.
ಶೋಭರಾಜ್ 19 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಇದೀಗ ವಯಸ್ಸಾಗಿರುವುದರಿಂದ ಆತನನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ. ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಲ್ಲಿ ಈತ ಜೈಲು ಸೇರಿದ್ದ. ಈತ ನೇಪಾಳದ ಜೈಲಿನಲ್ಲಿದ್ದಾನೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ನರ ಹಂತಕನನ್ನು ಬಂಧಿಮುಕ್ತಗೊಳಿಸಿದ 15 ದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕೆಂದು ನೇಪಾಳ ಸುಪ್ರಿಂಕೋರ್ಟ್ ಹೇಳಿದೆ.
ಆರೋಪಿ ಚಾರ್ಲ್ಸ್ ಫ್ರಾನ್ಸ್ ಪೌರತ್ವ ಹೊಂದಿದ್ದಾನೆ. ಆದರೆ, ನೇಪಾಳಕ್ಕೆ ನಕಲಿ ಪಾಸ್ ಪೋರ್ಟ್ ಬಳಸಿ ಬಂದಿದ್ದ. 1975ರಲ್ಲಿ ಈತ ಅಮೆರಿಕದ ಪ್ರಜೆಗಳಾದ ಕೋನಿ ಜೋ ಬೊರೊಜಿಂಚ್ (29)ಮತ್ತು ಆತನ ಪ್ರೇಯಸಿ ಕೆನಡಾ ಮೂಲದ ಲೌರೆಂಟ್ ಕಾರೆರ್(26) ಅವರನ್ನು ಹತ್ಯೆ ಮಾಡಿದ್ದ. ಈ ಸಂಬಂಧ ಚಾರ್ಲ್ಸ್ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಂತರ 2003 ಸೆಪ್ಟೆಂಬರ್ 1ರಂದು ನೇಪಾಳದ ಕ್ಯಾಸಿನೋದಲ್ಲಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಪೊಲೀಸರು ಆತನ ವಿರುದ್ಧ 1975ರಲ್ಲಿ ಕಠ್ಮಂಡು ಮತ್ತು ಭಕ್ತಪುರ್ ನಲ್ಲಿ ನಡೆದ ಎರಡು ಪ್ರತ್ಯೇಕ ಹತ್ಯೆ ಪ್ರಕರಣಗಳನ್ನು ದಾಖಲಿಸಿದ್ದರು.
ಕಠ್ಮಂಡುವಿನ ಸೆಂಟ್ರಲ್ ಜೈಲಿನಲ್ಲಿ ಚಾರ್ಲ್ಸ್ ಶೋಭಾರಾಜ್ಗೆ 21 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಯುಎಸ್ ಪ್ರಜೆಯನ್ನು ಹತ್ಯೆ ಮಾಡಿದಕ್ಕಾಗಿ 20 ವರ್ಷಗಳು ಮತ್ತು ನಕಲಿ ಪಾಸ್ಪೋರ್ಟ್ ಬಳಸಿದ್ದಕ್ಕಾಗಿ ಒಂದು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಇದೀಗ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಆರೋಪಿಗೆ ಬಿಡುಗಡೆ ಭಾಗ ಲಭ್ಯವಾಗಿದೆ. ವಯಸ್ಸಿನ ಮಾನ ದಂಡವನ್ನು ಮುಂದಿಟ್ಟುಕೊಂಡು ಆತನನ್ನು ಬಿಡುಗಡೆ ಮಾಡಲಾಗಿದೆ.