ಇಸ್ರೇಲ್, ಡಿ 22 (DaijiworldNews/DB): ಇಸ್ರೇಲ್ನ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಶೀಘ್ರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಬುಧವಾರ ತಡರಾತ್ರಿಯೇ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ಮಾಹಿತಿ ನೀಡಿರುವ ನೆತನ್ಯಾಹು, ಬಳಿಕ ಟ್ವೀಟ್ ಮಾಡಿ, ಸಂತಸವನ್ನು ಹಂಚಿಕೊಂಡರು. ಚುನಾವಣೆಯಲ್ಲಿ ನಮಗೆ ಉತ್ತಮ ಜನಬೆಂಬಲ ದೊರೆತಿದೆ. ಇದಕ್ಕಾಗಿ ಇಸ್ರೇಲಿಗರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇಸ್ರೇಲ್ ಪ್ರಜೆಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಸರ್ಕಾರ ರಚನೆಯಾಗಲಿದೆ ಎಂದಿದ್ದಾರೆ. ಆದರೆ ಪ್ರಮಾಣವಚನ ಸ್ವೀಕಾರ ದಿನಾಂಕವನ್ನು ಪ್ರಕಟಿಸಿಲ್ಲ. ಮುಂದಿನ ಒಂದು ವಾರದಲ್ಲಿ ಇದು ನಡೆಯಬಹುದು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇನ್ನು ಅಮೆರಿಕಾ ಮಾಧ್ಯಮವೊಂದರ ಪ್ರಕಾರ, ಕಳೆದ 38 ದಿನಗಳಿಂದ ಸಮ್ಮಿಶ್ರ ಸರ್ಕಾರಕ್ಕಾಗಿ ಇಸ್ರೇಲ್ನಲ್ಲಿ ಮಾತುಕತೆ ನಡೆಯುತ್ತಿತ್ತು. ಆದರೆ ಕೊನೆಗೆ ನೆತನ್ಯಾಹು ಅವರು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನೆತನ್ಯಾಹು ಸರ್ಕಾರ ರಚನೆಯಾಗುವುದರೊಂದಿಗೆ ಇಸ್ರೇಲ್ನಲ್ಲಿ ಮತ್ತೊಮ್ಮೆ ಬಲಪಂಥೀಯ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿದು ಬಂದಿದೆ.
ಸರ್ಕಾರ ರಚಿಸಲು ಪಕ್ಷಗಳಿಗೆ ಗಡುವು ನೀಡಲಾಗಿತ್ತು. ಗಡುವು ಅವಧಿಗೂ 20 ನಿಮಿಷ ಮೊದಲು ನೆತನ್ಯಾಹ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ಕರೆ ಮಾಡಿ ಸರ್ಕಾರ ರಚನೆಯ ವಿಷಯ ತಿಳಿಸಿದ್ದಾರೆ. ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಬೇಕೆಂಬ ಷರತ್ತಿನ ಮೇಲೆ ವಿವಿಧ ಪಕ್ಷಗಳು ನೆತನ್ಯಾಹು ಅವರಿಗೆ ಬೆಂಬಲ ನೀಡಿವೆ ಎನ್ನಲಾಗಿದೆ.