ಉಕ್ರೇನ್, ಡಿ 27 (DaijiworldNews/DB): ರಷ್ಯಾ-ಉಕ್ರೇನ್ ನಡುವಿನ ಯುದ್ದ ಕೊನೆಗೊಳಿಸಲು ಶಾಂತಿಸೂತ್ರ ತೀರಾ ಅಗತ್ಯ. ಇದಕ್ಕೆ ಭಾರತ ಬೆಂಬಲ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಭಾರತಕ್ಕೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ-ಉಕ್ರೇನ್ ಯುದ್ದದಿಂದಾಗಿ ಸಾಕಷ್ಟು ಸಾವು-ನೋವು, ಆಸ್ತಿ ಹಾನಿ, ಸಾರ್ವಜನಿಕ ಸೊತ್ತುಗಳ ನಾಶ ಸಂಭವಿಸಿದೆ. ಇದರಿಂದ ಯಾರಿಗೂ ನೆಮ್ಮದಿಯಿಲ್ಲ. ಜಿ20 ಅಧ್ಯಕ್ಷತೆ ವಹಿಸಿರುವ ಭಾರತವು ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಸಹಾಯ ಮಾಡಬೇಕು. ಶಾಂತಿಸೂತ್ರಕ್ಕೆ ಬೆಂಬಲಿಸಿ ಯುದ್ದ ಕೊನೆಗೊಳಿಸುವಲ್ಲಿ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಇನ್ನು ಝೆಲೆನ್ಸ್ಕಿ ಮನವಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳೂ ಯುದ್ದ ಕೊನೆಗೊಳಿಸಲು ಮುಂದಾಗಬೇಕು. ರಾಜತಾಂತ್ರಿಕ ಮಾರ್ಗದ ಮೂಲಕ ವಿವಾದ ಪರಿಹರಿಸಿಕೊಂಡು ಪರಸ್ಪರ ಅನ್ಯೋನ್ಯವಾಗಿರುವುದಕ್ಕೆ ಪ್ರಯತ್ನಿಸಬೇಕು. ಶಾಂತಿ ಒಪ್ಪಂದಕ್ಕೆ ಭಾರತದ ಬೆಂಬಲ ಖಂಡಿತವಾಗಿಯೂ ಇರುತ್ತದೆ ಎಂದರು.