ಉಕ್ರೇನ್, ಡಿ 29 (DaijiworldNews/DB): ಉಕ್ರೇನ್ನಲ್ಲಿ ರಷ್ಯಾ ಗುರುವಾರ ಬೆಳ್ಳಂಬೆಳಗ್ಗೆ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದ್ದು, ಇದು ಅತಿ ದೊಡ್ಡ ವೈಮಾನಿಕ ದಾಳಿಯಾಗಿದೆ. ಕ್ಷಿಪಣಿಗಳು ಹಾರಾಟವಾಗುತ್ತಿದ್ದಂತೆ ಉಕ್ರೇನ್ನಾದ್ಯಂತ ವಾಯುದಾಳಿಯ ಸೈರನ್ ಮೊಳಗಿದೆ.
ರಷ್ಯಾ ಹಾರಿಸಿದ ಅತಿ ದೊಡ್ಡ ವೈಮಾನಿಕ ದಾಳಿ ಇದಾಗಿದೆ ಎನ್ನಲಾಗಿದ್ದು, ಉಕ್ರೇನ್ ರಾಜಧಾನಿ ಕೈವ್, ಝೈಟೊಮೈರ್ ಮತ್ತು ಒಡೆಸಾ ಸೇರಿದಂತೆ ವಿವಿಧ ನಗರಗಳಲ್ಲಿ ಭಾರೀ ಸ್ಪೋಟದ ಸದ್ದು ಕೂಡಾ ಕೇಳಿ ಬಂದಿದೆ ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.
ಕಳೆದ ಹಲವಾರು ಸಮಯದಿಂದ ರಷ್ಯಾ-ಉಕ್ರೇನ್ ನಡುವೆ ಯುದ್ದ ನಡೆಯುತ್ತಿದ್ದು, ಈಗಾಗಲೇ ರಷ್ಯಾ ದಾಳಿಯಿಂದಾಗಿ ಉಕ್ರೇನ್ನ ಹಲವು ನಗರ, ಪಟ್ಟಣ, ಮೂಲ ಸೌಕರ್ಯಗಳು ನಾಶಗೊಂಡಿವೆ. ಆಸ್ಪತ್ರೆಗಳಲ್ಲಿಯೂ ರಷ್ಯಾ ಸ್ಪೋಟ ನಡೆಸಿ ಹಲವಾರು ಸಾವು ನೋವಿಗೆ ಕಾರಣವಾಗಿದೆ.