ಮ್ಯಾನ್ಮಾರ್, ಡಿ 30 ( DaijiworldNews/MS): ಸೇನೆಯ ಆಡಳಿತದಲ್ಲಿರುವ ಮ್ಯಾನ್ಮಾರ್ನಲ್ಲಿ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಐದು ಭ್ರಷ್ಟಾಚಾರದ ಆರೋಪಗಳ ಪ್ರಕರಣಗಳಲ್ಲಿ ದೋಷಿ ಎಂದು ಅಲ್ಲಿನ ನ್ಯಾಯಾಲಯವು ತೀರ್ಪು ನೀಡಿದೆ.
76 ವರ್ಷದ ಸೂಕಿ ಅವರ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು, 7 ವರ್ಷಗಳ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಸೇನೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೂಕಿ ವಿರುದ್ಧ ಇನ್ನೂ ಒಂದು ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಕಾನೂನುಬಾಹಿರವಾಗಿ ಆಮದು ಮಾಡಿಕೊಳ್ಳುವುದು ಮತ್ತು ವಾಕಿ-ಟಾಕಿಗಳನ್ನು ಹೊಂದುವುದು, ಕೊರೋನಾವೈರಸ್ ನಿರ್ಬಂಧಗಳನ್ನು ಉಲ್ಲಂಘಿಸುವುದು, ದೇಶದ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸುವುದು, ದೇಶದ್ರೋಹ ಮತ್ತು ಚುನಾವಣಾ ವಂಚನೆ ಸೇರಿದಂತೆ ಹಲವಾರು ಇತರ ಅಪರಾಧಗಳಿಗೆ ಆಂಗ್ ಸಾನ್ ಸೂಕಿಯವರಿಗೆ ಶಿಕ್ಷೆ ವಿಧಿಸಲಾಗಿದೆ.
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸೂಕಿ ಅವರು ಈಗಾಗಲೇ ಅಪರಾಧಿ ಎಂದು ಘೋಷಿಸಲಾಗಿರುವ ಹಲವು ಪ್ರಕರಣಗಳಲ್ಲಿ 26 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅವರು ನಿರಾಕರಿಸುತ್ತಲೇ ಬಂದಿದ್ದಾರೆ.