ವ್ಯಾಟಿಕನ್, ಡಿ 31 (DaijiworldNews/HR): ವಿಶ್ರಾಂತ ಪೋಪ್ ಬೆನೆಡಿಕ್ಟ್ XVI(16) ಅವರು ವ್ಯಾಟಿಕನ್ನ ಮೇಟರ್ ಎಕ್ಲೇಸಿಯಾದಲ್ಲಿ ಶನಿವಾರ ನಿಧನರಾದರು ಎಂದು ಹೋಲಿ ಸೀ ವಕ್ತಾರರು ತಿಳಿಸಿದ್ದಾರೆ.
ವಿಶ್ರಾಂತ ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರವನ್ನು ಜನವರಿ 2ರಿಂದ ಸೇಂಟ್ ಪೀಟರ್ಸ್ ಬೆಸಿಲಿಯಾದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ವ್ಯಾಟಿಕನ್ ತಿಳಿಸಿದೆ.
ಬೆನೆಡಿಕ್ಟ್ ಅವರು ಏಪ್ರಿಲ್ 2005 ರಿಂದ ಫೆಬ್ರವರಿ 2013 ರವರೆಗೆ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದ್ದು, ಜರ್ಮನಿಯವರಾದ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ಮೂಲ ಹೆಸರು ಜೋಸೆಫ್ ರಟ್ಜಿಂಗರ್ ಆಗಿದ್ದು, ಫೆಬ್ರವರಿ 2013 ರಲ್ಲಿ ಅನಾರೋಗ್ಯದ ಕಾರಣ ನೀಡಿ ಬೆನೆಡಿಕ್ಟ್ ಅವರು ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬೆನೆಡಿಕ್ಟ್ ತನ್ನ ಅಂತಿಮ ವರ್ಷಗಳನ್ನು ವ್ಯಾಟಿಕನ್ನ ಮೇಟರ್ ಎಕ್ಲೇಸಿಯಾದಲ್ಲಿ ಕಳೆದಿದ್ದು, ಅವರ ಉತ್ತರಾಧಿಕಾರಿ ಪೋಪ್ ಫ್ರಾನ್ಸಿಸ್ ಅವರು ಅಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.