ನ್ಯೂಯರ್ಕ್, ಜ 02 ( DaijiworldNews/MS): ಮರಣದ ನಂತರ ಮಾನವನ ಮೃತದೇಹವನ್ನು " ಸಾವಯವ ಗೊಬ್ಬರ "ವಾಗಿ ಪರಿವರ್ತಿಸುವ 'ಹಸಿರು ಅಂತ್ಯಕ್ರಿಯೆ' ಗೆ ಅಮೆರಿಕ ನ್ಯೂಯಾರ್ಕ್ ರಾಜ್ಯ ಒಪ್ಪಿಗೆ ನೀಡಿದೆ. ಈ ಮೂಲಕ ಇಂತಹ "ಮಾನವ ಗೊಬ್ಬರ "ಕ್ಕೆ ಅವಕಾಶ ಕಲ್ಪಿಸಿದ ಅಮೆರಿಕ ಆರನೇ ರಾಜ್ಯ ಎನಿಸಿಕೊಂಡಿದೆ. 2019 ರಲ್ಲಿ, ವಾಷಿಂಗ್ಟನ್ ಇದನ್ನು ಕಾನೂನುಬದ್ಧಗೊಳಿಸಿದ ಮೊದಲ ಅಮೇರಿಕಾದ ರಾಜ್ಯವಾಗಿದೆ. ಕೊಲೊರಾಡೋ, ಒರೆಗಾನ್, ವರ್ಮೊಂಟ್ ಮತ್ತು ಕ್ಯಾಲಿಫೋರ್ನಿಯಾ ಕೂಡಾ ಬಳಿಕ ಇದನ್ನು ಅನುಸರಿಸಿತ್ತು.
ಸಮಾಧಿ ಅಥವಾ ಶವಸಂಸ್ಕಾರಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಅಂತ್ಯಕ್ರಿಯೆಯಾಗಿದ್ದು, ಒಬ್ಬ ವ್ಯಕ್ತಿಯು ಈಗ ತನ್ನ ಮರಣದ ನಂತರ ತನ್ನ ದೇಹವನ್ನು ಮಣ್ಣಾಗಿ ಪರಿವರ್ತಿಸಬಹುದಾಗಿದೆ. ಈ ಕ್ರಿಯೆಯನ್ನು ‘ಹ್ಯೂಮನ್ ಕಾಂಪೋಸ್ಟಿಂಗ್‘ ಎನ್ನಲಾಗುತ್ತದೆ.
ಪರಿಸರ ಸ್ನೇಹಿ ಅಂತ್ಯಕ್ರಿಯೆಯ ಪ್ರಕ್ರಿಯೆ ಹೇಗೆ?
ವುಡ್ಚಿಪ್ಸ್, ಅಲ್ಫಾಲ್ಫಾ ಮತ್ತು ಒಣಹುಲ್ಲಿನಂತಹ ಆಯ್ದ ವಸ್ತುಗಳ ಜೊತೆಗೆ ದೇಹವನ್ನು ಮುಚ್ಚಿದ ಬಾಕ್ಸ್ ನಲ್ಲಿ ಹಾಕಲಾಗುತ್ತದೆ ಸೂಕ್ಷ್ಮಜೀವಿಗಳ ಕ್ರಿಯೆಯಿಂದ ಮೃತದೇಹ ಜೈವಿಕವಾಗಿ ವಿಘಟನೆಗೊಂಡು ಸುಮಾರು ಒಂದು ತಿಂಗಳ ಅವಧಿಯ ನಂತರ ಮಣ್ಣಿನಂತಹ ಗೊಬ್ಬರವಾಗಿ ಪರಿವರ್ತನೆಯಾದ ಬಳಿಕ ಇದನ್ನು ಅವರ ಪ್ರೀತಿಪಾತ್ರರಿಗೆ ನೀಡಲಾಗುತ್ತದೆ. ಈ ಗೊಬ್ಬರವನ್ನು ಮೃತರ ನೆನಪಿಗಾಗಿ ಹೂವುಗಳು, ತರಕಾರಿಗಳು ಅಥವಾ ಮರಗಳನ್ನು ನೆಡಲು ಬಳಸಬಹುದಾಗಿದೆ.
ಸ್ಮಶಾನಗಳಿಗೆ ಭೂಮಿ ಸೀಮಿತವಾಗಿರುವ ನಗರಗಳಲ್ಲಿ ಇದು ಹೆಚ್ಚು ಪ್ರಾಯೋಗಿಕವಾಗಿದೆ. ಸಾಂಪ್ರದಾಯಿಕ ಅಂತ್ಯಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚು ಹೊರಸೂಸುವುದರಿಂದ ಹಸಿರುಮನೆ ಮೇಲೆ ಪರಿಣಾಮ ಬೀರಲಿದೆ. ಶವಪೆಟ್ಟಿಗೆಗಾಗಿ ಮರ, ಭೂಮಿ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಸಹ ಬಳಸುವುದರಿಂದ "ಹಸಿರು ಅಂತ್ಯಕ್ರಿಯೆ " ಹೆಚ್ಚು ಉತ್ತಮ ಎಂದು ಅಭಿಪ್ರಾಯಪಡಲಾಗಿದೆ.
ಪರಿಸರ ಸ್ನೇಹಿ ಅಂತ್ಯಕ್ರಿಯೆಯೂ ಈಗಾಗಲೇ ಸ್ವೀಡನ್ನಲ್ಲಿ ಕಾನೂನುಬದ್ಧವಾಗಿದೆ.