ಕಾಬೂಲ್, ಜ 03 (DaijiworldNews/HR): 1971ರ ಯುದ್ಧದಲ್ಲಿ ಪಾಕಿಸ್ತಾನ ಭಾರತಕ್ಕೆ ಶರಣಾಗುತ್ತಿರುವ ಚಿತ್ರವನ್ನು ತಾಲಿಬಾನ್ ನಾಯಕ ಅಹ್ಮದ್ ಯಾಸಿರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತಾಲಿಬಾನ್ ನಾಯಕ ಅಹ್ಮದ್ ಯಾಸಿರ್, ಇದು ಅಫ್ಘಾನಿಸ್ತಾನ, ಹೆಮ್ಮೆಯ ಸಾಮ್ರಾಜ್ಯಗಳ ಪಾಲಿನ ಸ್ಮಶಾನ. ನಮ್ಮ ಮೇಲೆ ಮಿಲಿಟರಿ ದಾಳಿಯ ಬಗ್ಗೆ ಯೋಚಿಸಬೇಡಿ, ಹಾಗೊಂದು ವೇಳೆ ಪ್ರಯತ್ನಿಸಿದರೆ, ಭಾರತದೊಂದಿಗಿನ ಮಿಲಿಟರಿ ಒಪ್ಪಂದದ ನಾಚಿಕೆಗೇಡಿನ ಪುನರಾವರ್ತನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಇದು ಎರಡನೇ ಜಾಗತಿಕ ಯುದ್ಧದ ನಂತರ ನಡೆದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದ್ದು, ಪಾಕಿಸ್ತಾನದ ಸೇನೆಯ 93ಸಾವಿರ ಸೈನಿಕರು ಭಾರತೀಯ ಪಡೆಗಳ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿ ಹೊಸ ರಾಷ್ಟ್ರಕ್ಕೆ ಜನ್ಮ ನೀಡಿದ್ದರು.
1971ರ ಭಾರತ-ಪಾಕ್ ಯುದ್ಧ ಪಾಕಿಸ್ತಾನದ ಕಡೆಯಿಂದಲೇ ಪ್ರಾರಂಭವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯ ವಾಯುಪಡೆ ನೆಲೆಗಳ ಮೇಲೆ ಪೂರ್ವಭಾವಿ ದಾಳಿಗಳನ್ನು ಪಾಕ್ ಪ್ರಾರಂಭಿಸಿತ್ತು. ಈ ಅಪ್ರಚೋದಿತ ದಾಳಿಗಳಿಗೆ ಭಾರತೀಯ ರಕ್ಷಣಾ ಪಡೆಗಳು ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ, ಭೂಮಿ, ಸಮುದ್ರ ಮತ್ತು ಗಾಳಿಯ ಮೇಲೆ ತ್ವರಿತ ಪ್ರತಿಕ್ರಿಯೆ ನಡೆಸಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದರು. ಆ ಬಳಿಕ ಪಾಕಿಸ್ತಾನ ಭಾರತಕ್ಕೆ ಶರಣಾಗತವಾಗಿತ್ತು.