ಉಕ್ರೇನ್, ಜ 03 (DaijiworldNews/DB): ಉಕ್ರೇನ್ನ ಯೋಧರೊಬ್ಬರು ತನ್ನ ಎಳೆಯ ಕಂದಮ್ಮನನ್ನು ಗಿಟಾರ್ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ದದ ಕರಾಳತೆಯ ನಡುವೆಯೂ ಮಗುವಿನೊಂದಿಗೆ ಕಳೆಯುತ್ತಿರುವ ಯೋಧನ ಕೆಲಸಕ್ಕೆ ನೆಟ್ಟಿಗರು ಭಾವುಕರಾಗಿದ್ದಾರೆ.
ಉಕ್ರೇನಿನ ಆಂತರಿಕ ವ್ಯವಹಾರಗಳ ಸಚಿವರಿಗೆ ಸಲಹೆಗಾರರಾಗಿರುವ ಆ್ಯಂಟನ್ ಗೆರಾಶ್ಚೆಂಕೋ ಅವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯೋಧ ಒಲೆಗ್ ಬೆರೆಸ್ಟೋವಿ ಅವರು ತಮ್ಮ ಮಗುವನ್ನು ಗಿಟಾರ್ ಮೇಲೆ ಮಲಗಿಸಿಕೊಂಡು ಮುದ್ದಾಗಿ ಜೋಗುಳ ಹಾಡುತ್ತಾರೆ. ತಂದೆಯ ಜೋಗುಳದ ಆಲಾಪನೆಗೆ ಮನಸೋತ ಕಂದಮ್ಮ ಹಾಗೇ ನಿದ್ದೆ ಮಾಡಿದೆ. ಈ ವೀಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಯೋಧನ ಮಗುವಿನ ಲಾಲನೆಯ ಪರಿಗೆ ಮನಸೋತು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.
ಉಕ್ರೇನ್ ರಷ್ಯಾದ ದಾಳಿಯಿಂದಾಗಿ ಕತ್ತಲೆಯಲ್ಲಿಯೇ ಇದೆ ಎಂಬ ನೋವು ಹಲವರದ್ದು. ಇಂತಹ ಪ್ರಯತ್ನಗಳ ಮೂಲಕ ಉಕ್ರೇನ್ನಲ್ಲಿ ಹೊಸ ಬೆಳಕು ಮೂಡಲಿ ಎಂದು ಜನ ಆಶಿಸುತ್ತಿದ್ದಾರೆ. ಸುಮಾರು 74 ಮಂದಿ ವೀಡಿಯೋವನ್ನು ನೋಡಿದ್ದಾರೆ. ಭಾಷೆಯಾಗಲೀ, ಅರ್ಥವಾಗಲೀ ತಿಳಿಯದಿದ್ದರೂ ಮಗುವನ್ನು ಲಾಲಿ ಹಾಡಿ ನಿದ್ರಿಸುತ್ತಿರುವ ಯೋಧನ ಕೆಲಸ ದೊಡ್ಡದು. ಇದನ್ನು ಮತ್ತೆ ಮತ್ತೆ ಕೇಳಿ ಆನಂದಿಸಿದೆ ಎಂಬ ಟ್ವಿಟರ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.