ಟೋಕಿಯೋ, ಜ 04 (DaijiworldNews/DB): ಪ್ರಾಂತೀಯ ಜನಸಂಖ್ಯಾ ಸಮತೋಲನ ಕಾಯ್ದುಕೊಳ್ಳಲು ಜಪಾನ್ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಅದರಂತೆ ಜಪಾನ್ ರಾಜಧಾನಿಯನ್ನು ತೊರೆದರೆ ಪ್ರತಿ ಕುಟುಂಬದ ಪ್ರತಿ ಮಗುವಿಗೆ 1 ದಶಲಕ್ಷ ಯೆನ್ (6.34 ಲಕ್ಷ ರೂ.) ನೀಡುವುದಾಗಿ ಘೋಷಣೆ ಮಾಡಿದೆ.
ಜಪಾನ್ನಲ್ಲಿ ಸದ್ಯ ಪ್ರಾಂತೀಯ ಜನಸಂಖ್ಯಾ ಅಸಮತೋಲನ ಎದುರಾಗಿದ್ದು, ಇದನ್ನು ಸರಿಪಡಿಸಲೇಬೇಕಾದ ಇಕ್ಕಟ್ಟಿನಲ್ಲಿ ಅಲ್ಲಿನ ಸರ್ಕಾರ ಇದೆ. ಕೋವಿಡ್ ಕಾರಣದಿಂದಾಗಿ ಜಪಾನ್ನಲ್ಲಿ ಜನಸಂಖ್ಯೆ ಕುಸಿತ ಕಂಡಿದೆ ಎನ್ನಲಾಗಿದೆ. ಆದರೆ ಇದೇ ವೇಲೆ ಉತ್ತಮ ಸೌಲಭ್ಯಗಳಿಗಾಗಿ ಜನ ನಗರ ಪ್ರದೇಶಗಳತ್ತ ವಲಸೆ ಹೋಗಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯೆ ತೀರಾ ಕ್ಷೀಣಿಸಿದೆ. ಇದು ಪ್ರಾಂತೀಯ ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗಿದೆ.
ಗ್ರಾಮೀಣ ಭಾಗಗಳಿಗೆ ಜನ ಹಿಂತಿರುಗಿದರೆ ಹಾಗೂ ನಗರಗಳಿಂದ ವಸತಿ ಬದಲಾಯಿಸಿದರಷ್ಟೆ ಪ್ರಾಂತೀಯ ಜನಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಟೋಕಿಯೋ ನಗರ ತೊರೆಯುವ ಕುಟುಂಬಗಳಿಗೆ ಸರ್ಕಾರವು ಗಿಫ್ಟ್ ರೂಪದಲ್ಲಿ 1.90 ಲಕ್ಷ ರೂ.ಗಳ ಸಹಾಯಧನ ಒದಗಿಸುವುದಾಗಿ ಘೋಷಿಸಿತ್ತು. ಇದೀಗ ಈ ಸೌಲಭ್ಯವನ್ನು ಸರ್ಕಾರ ಪುನರ್ ಪರಿಶೀಲಿಸಿದ್ದು, ಟೋಕಿಯೋ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.34 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ.