ಲಂಡನ್ ,ಮಾ 09(MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮಹಾವಂಚಕ ವಜ್ರ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿದ್ದಾನೆ ತಿಳಿದುಬಂದಿದೆ.
'ದಿ ಟೆಲಿಗ್ರಾಫ್' ಮಾಧ್ಯಮ ಪ್ರಕಟಿಸಿದ ವಿಡಿಯೋವೊಂದರಲ್ಲಿ ,ಲಂಡನ್ ಬೀದಿಯೊಂದರಲ್ಲಿ ಓಡಾಡುತ್ತಿರುವ ನೀರವ್ ಮೋದಿಯನ್ನು ಮಾತಿಗೆಳೆಯಲು ಪತ್ರಕರ್ತ ಪ್ರಯತ್ನಿಸಿದ್ದಾರೆ. ಆದರೆ ಎಲ್ಲಾ ಪ್ರಶ್ನೆಗಳಿಗೂ ಆತ " ನೋ ಕಮೆಂಟ್ಸ್" ಎಂದು ಉತ್ತರಿಸಿದ್ದಾನೆ.
ಲಂಡರ್ ನಲ್ಲಿ ರಾಜರೋಷವಾಗಿಯೇ ಓಡಾಡುತ್ತಿರುವ ನೀರವ್ ಮೋದಿ ಮೀಸೆ ಹಾಗೂ ಗಡ್ಡ ಬಿಟ್ಟು ತನ್ನ ಲುಕ್ ಚೇಂಜ್ ಮಾಡಿಕೊಂಡಿದ್ದು, ಆಸ್ಟ್ರೀಚ್ ಹೈಡ್ ಬ್ರಾಂಡ್ ನ 8 ಲಕ್ಷ ಬೆಳೆಬಾಳುವ ಜಾಕೆಟ್ ಧರಿಸಿದ್ದಾನೆ. ಇದಲ್ಲದೆ ಲಂಡನ್ ನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿರುವ ನೀರವ್ ಅಲ್ಲಿಯೇ ಹೊಸ ಡೈಮಂಡ್ ಉದ್ಯಮ ಪ್ರಾರಂಭಿಸಿದ್ದಾನೆ ಎಂದು ತಿಳಿದುಬಂದಿದೆ.
ಮೋದಿ ದಿನನಿತ್ಯವೂ ತನ್ನ ನಾಯಿಮರಿಯ ಜೊತೆಗೆ ತನ್ನ ಅಪಾರ್ಟ್ಮೆಂಟ್ ಹಾಗೂ ಸೊಹೊದಲ್ಲಿರುವ ತನ್ನ ಡೈಮಂಡ್ ಕಂಪೆನಿ ಕಚೇರಿಗೆ ಓಡಾಡುತ್ತಿರುತ್ತಾನೆ. ಬ್ರಿಟನ್ನಲ್ಲಿ ಕಾನೂನುಬದ್ಧವಾಗಿ ಉದ್ಯಮ ನಡೆಸಲು ಅಗತ್ಯವಿರುವ ರಾಷ್ಟ್ರೀಯ ಇನ್ಸೂರೆನ್ಸ್ ನಂಬರ್ನ್ನು ಪಡೆದಿದ್ದಾನೆ. ಇನ್ನು ತನ್ನ ಬ್ಯಾಂಕ್ ಖಾತೆಗಳನ್ನು ಆನ್ಲೈನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ‘ದಿ ಟೆಲಿಗ್ರಾಫ್ ’ವರದಿ ಮಾಡಿದೆ