ನ್ಯೂಯಾರ್ಕ್, ಜ 11 (DaijiworldNews/DB): 35 ಮಿಲಿಯನ್ ವರ್ಷಗಳ ಹಿಂದೆ ಪ್ರಪಂಚದ ಎಲ್ಲಾ ಸಮುದ್ರಗಳಲ್ಲಿ ವಾಸಿಸುತ್ತಿದ್ದ ಪ್ರಸ್ತುತ ಅಳಿವಿನಂಚಿನಲ್ಲಿರುವ ಅತಿ ದೊಡ್ಡ ಶಾರ್ಕ್ ಮೀನೊಂದರ ದಂತವನ್ನು ಬಾಲಕಿಯೊಬ್ಬಳು ಅಚಾನಕ್ ಆಗಿ ಪತ್ತೆ ಹಚ್ಚಿದ ಅಪರೂಪದ ಪ್ರಸಂಗ ಅಮೆರಿಕಾದಲ್ಲಿ ನಡೆದಿದೆ.
ಅಳಿವಿನಂಚಿನಲ್ಲಿರುವ ಓಟೋಡಸ್ ಮೆಗಾಲೊಡಾನ್ ಶಾರ್ಕ್ ಅತಿ ದೊಡ್ಡ ಶಾರ್ಕ್. ಸದ್ಯ ಇದು ಅಳಿವಿನಂಚಿನಲ್ಲಿದ್ದು, ಪತ್ತೆಯಾಗುವುದೇ ಅಪರೂಪ. ಹಾಗಿದ್ದಾಗ್ಯೂ ಅಮೆರಿಕಾದ ಮೇರಿಲ್ಯಾಂಡ್ ಸಮುದ್ರ ತೀರದಲ್ಲಿ ಮೊಲ್ಲಿ ಸ್ಯಾಂಪ್ಸನ್ ಎಂಬ ಬಾಲಕಿಯೊಬ್ಬಳು ಈ ಶಾರ್ಕ್ನ ಹಲ್ಲನ್ನು ಕಡಲತೀರದಲ್ಲಿ ಪತ್ತೆ ಹಚ್ಚಿದ್ದಾಳೆ. ಅಲ್ಲದೆ ಹಲ್ಲಿನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾಳೆ.
ಈಕೆ ಪತ್ತೆ ಹಚ್ಚಿದ ಶಾರ್ಕ್ನ ಹಲ್ಲು 5 ಇಂಚು ಉದ್ದ ಹೊಂದಿತ್ತು. ಇನ್ನು ಈ ಫೋಟೋವನ್ನು ಬಾಲಕಿಯ ತಾಯಿ ಅಲಿಸಿಯಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶತಮಾನಗಳಿಗೊಮ್ಮೆ ಇಂತಹ ಘಟನೆ ನಡೆಯುತ್ತದೆ ಎಂದು ಬೀಚ್ ಸಿಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಶಾರ್ಕ್ 35 ಮಿಲಿಯನ್ ವರ್ಷಗಳ ಹಿಂದೆ ವಿಶ್ವದ ಎಲ್ಲಾ ಸಮುದ್ರಗಳಲ್ಲಿಯೂ ವಾಸಿಸುತ್ತಿದ್ದವಾದರೂ, ಕ್ರಮೇಣ ಅವುಗಳ ಸಂತತಿ ಅಳಿವಿನಂಚಿಗೆ ಸಾಗಿ ಕಾಣಿಸಿಕೊಳ್ಳುವುದೇ ಅಪರೂಪವಾಗಿತ್ತು.