ರಿಯಾದ್, ಜ 13 (DaijiworldNews/DB): ಸಂಯೋಜಿತ ಅವಳಿಗಳನ್ನು ಪ್ರತ್ಯೇಕಿಸಲು 27 ಮಂದಿ ವೈದ್ಯರು ಸುಮಾರು 11 ಗಂಟೆಗಳ ಕಾಲ ಹರಸಾಹಸ ಪಟ್ಟ ಪ್ರಸಂಗ ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಇಲ್ಲಿ ಜನಿಸಿದ ಅವಳಿ ಮಕ್ಕಳ ಲಿವರ್ ಮತ್ತು ಹೊಟ್ಟಿ ಅಂಟಿಕೊಂಡಿತ್ತು. ಹೀಗಾಗಿ ರಾಜ ಸಾಲ್ಮನ್ ಅವರ ಆದೇಶದ ಮೇರೆಗೆ ಕಿಂಗ್ ಅಬ್ದುಲ್ಲಾ ವಿಶೇಷ ಆಸ್ಪತ್ರೆಯಲ್ಲಿ ಸಂಯೋಜಿತ ಅವಳಿಗಳನ್ನು ಪ್ರತ್ಯೇಕಿಸಲು ಶಸ್ತ್ರಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಯಿತು. 27 ಮಂದಿ ವೈದ್ಯರು ಆರು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು. ಇಷ್ಟೂ ವೈದ್ಯರು ಸುಮಾರು 11 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ ಕಾರ್ಯಾಚರಣೆ ಶೇ.70ರಷ್ಟು ಮಾತ್ರ ಸಂಪೂರ್ಣಗೊಂಡಿದೆ. ಇನ್ನೂ ಕೆಲವು ಅಂಗಗಳು ಸಿಲುಕಿಕೊಂಡಿವೆ ಎಂದು ವೈದ್ಯರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸ್ಪೆಷಲಿಸ್ಟ್ಗಳೊಂದಿಗೆ ನರ್ಸ್ಗಳು, ಟೆಕ್ನಿಕಲ್ ಸ್ಟಾಫ್ ಸಹಿತ ಶಸ್ತ್ರಚಿಕಿತ್ಸೆಯಲ್ಲಿ ಇನ್ನೂ ಹಲವರು ಪಾಲ್ಗೊಂಡರು. ಈಗಾಗಲೇ 23 ದೇಶಗಳ 127 ಮಂದಿ ಸಂಯೋಜಿತ ಅವಳಿ ಮಕ್ಕಳನ್ನು ಇಲ್ಲಿ ಬೇರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.