ಕಠ್ಮಂಡು, ಜ 15 ( DaijiworldNews/MS): ನೇಪಾಳದ ಕಠ್ಮಂಡುವಿನಲ್ಲಿ ಇಂದು ಬೆಳಗ್ಗೆ ನಡೆದ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ ಇದುವರೆಗೆ ಒಟ್ಟು 40 ಮಂದಿ ಸಾವನ್ನಪ್ಪಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ, ಇಬ್ಬರು ಪುಟ್ಟ ಮಕ್ಕಳು, ಐವರು ಭಾರತೀಯರು ಸೇರಿದಂತೆ 10 ಜನ ವಿದೇಶಿಯರು ಸೇರಿ ಒಟ್ಟು 72 ಮಂದಿ ಪ್ರಯಾಣಿಕರಿದ್ದರು.
ಭಾರತೀಯರು ಮಹಾರಾಷ್ಟ್ರದ ಥಾಣೆ ಎಂದು ತಿಳಿದುಬಂದಿದ್ದು, ಒಂದೇ ಕುಟುಂಬದ ಆಶೋಕ್ ಕಲುಮಾರ್,ತ್ರಿಪಾಠಿ, ಪತ್ನಿ ವೈಭವಿ ಬಾಂಡೇಕರ್, ಮಕ್ಕಳಾದ ಧನುಷ್, ರಿತಿಕಾ ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇನ್ನು ವಿಮಾನ ದುರಂತಕ್ಕೀಡಾಗುವ ಕೊನೆಕ್ಷಣದ ದೃಶ್ಯ ಕೂಡ ಸೆರೆ ಆಗಿದ್ದು, ಅದು ಈಗ ವೈರಲ್ ಆಗಿದೆ. ವಿಮಾನ ಬಹುತೇಕ ಸುಟ್ಟು ಕರಕಲಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ.
ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನವು ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮೀಪದಲ್ಲಿದ್ದಾಗ ಸೇಟಿ ನದಿಯ ದಡದಲ್ಲಿರುವ ನದಿಯ ಕಮರಿಗೆ ಅಪ್ಪಳಿಸಿತು. ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ.