ಕಠ್ಮಂಡು (ನೇಪಾಳ), ಜ 16 (DaijiworldNews/DB): ಪೊಖಾರದಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದ ಸ್ಥಳದಿಂದ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ನೇಪಾಳ ಸೇನೆ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ನೇಪಾಳ ಸೇನಾ ವಕ್ತಾರ ಕೃಷ್ಣ ಪ್ರಸಾದ್ ಭಂಡಾರಿ, ಭಾನುವಾರದ ವಿಮಾನ ದುರಂತ ಸ್ಥಳದಿಂದ ಜೀವಂತವಾಗಿ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಆ ಮೂಲಕ ವಿಮಾನದಲ್ಲಿದ್ದ ಐವರು ಭಾರತೀಯರು ಸೇರಿದಂತೆ 72 ಮಂದಿಯೂ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಪೊಖಾರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಯೇತಿ ಏರ್ಲೈನ್ಸ್ ವಿಮಾನ ಭಾನುವಾರ ಪತನಗೊಂಡಿತ್ತು. ಅಪಘಾತ ನಡೆಯಲು ಕಾರಣಗಳನ್ನು ಪರಿಶೀಲಿಸಲು ಹಾಗೂ ತನಿಖೆಗಾಗಿ ನೇಪಾಳ ಅಧಿಕಾರಿಗಳ ವಿಶೇಷ ಆಯೋಗ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಭಾನುವಾರ ಪೋಖರಾದಲ್ಲಿ ವಿಮಾನ ಅಪಘಾತದ ನಂತರ ಮಂತ್ರಿ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದರು.
ಪ್ರವಾಸಕ್ಕೆ ಹೋದ ಭಾರತೀಯರು
ನೇಪಾಲ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಐವರು ಭಾರತೀಯರ ಪೈಕಿ ನಾಲ್ವರು ಪ್ರವಾಸಕ್ಕೆಂದು ಹೋಗಿದ್ದವರಾಗಿದ್ದರು. ಪೋಖಾರದ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಉತ್ತರ ಪ್ರದೇಶದವರಾದ ಅಭಿಷೇಕ್ ಖುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಮೃತಪಟ್ಟ ಭಾರತೀಯ ಪ್ರಜೆಗಳು ಎಂದು ಗುರುತಿಸಲಾಗಿದೆ. ಇನ್ನು ದುರಂತದಲ್ಲಿ ಮಡಿದ ಭಾರತೀಯ ಪ್ರಜೆಗಳ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಅಂದು ಪತಿ, ಈಗ ಪತ್ನಿ ಸಾವು
ನಿನ್ನೆ ನಡೆದ ದುರಂತದಲ್ಲಿ ಪತನಕ್ಕೀಡಾದ ವಿಮಾನದ ಸಹ ಪೈಲಟ್ ಆಗಿದ್ದ ಅಂಜು ಖತಿವಾಡ ಕ್ಯಾಪ್ಟನ್ ಆಗುವ ಕನಸು ಹೊತ್ತು ಯಶಸ್ವಿ ಲ್ಯಾಂಡಿಂಗ್ಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿ ಸಾವನ್ನಪ್ಪಿದ್ದಾರೆ. ಅಂಜು ಖತಿವಾಡ ಅವರ ಪತಿಯೂ ಸಹ ದೇ ಯೇಟಿ ಏರ್ ಲೈನ್ಸ್ ನಲ್ಲಿ ಪೈಲಟ್ ಆಗಿದ್ದಾಗ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. 2006ರ ಜೂನ್ 21ರಂದು ನೇಪಾಲಗಂಜ್ನಿಂದ ಜುಮ್ಲಾಗೆ ತೆರಳುತ್ತಿದ್ದ 9ಎನ್ ಇಕ್ಯೂ ವಿಮಾನ ಪತನಗೊಂಡು ಅಂಜು ಪತಿ ದೀಪಕ್ ಪೋಖ್ರೆಲ್ ಸಹಿತ ನಾಲ್ವರು ಸಿಬಂದಿ ಮತ್ತು ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.