ವಾಷಿಂಗ್ಟನ್, ಜ 17 (DaijiworldNews/DB): ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಪಾಕ್ ಮೂಲದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ. ಭಾರತದ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಿದ್ದ ಚೀನಾಕ್ಕೆ ಇದೀಗ ತೀವ್ರ ಮುಖಭಂಗವಾಗಿದೆ.
ನಿನ್ನೆ (ಜನವರಿ 16) ಭದ್ರತಾ ಮಂಡಳಿ ಸಮಿತಿಯು ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ. 1267 (1999), 1989 (2011) ಮತ್ತು 2253 (2015) ISIL (ದಯೆಶ್), ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದಂತೆ ನಿರ್ಣಯಗಳಿಗೆ ಅನುಮೋದನೆ ನೀಡಿತು. ಇನ್ನು ವ್ಯಕ್ತಿಯ ಸೊತ್ತುಗಳ ಜಫ್ತಿ, ಪ್ರಯಾಣ ನಿಷೇಧ, ಶಸ್ತ್ರಾಸ್ತ್ರ ನಿರ್ಬಂಧಕ್ಕೂ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.
ಅಬ್ದುಲ್ ರೆಹಮಾನ್ ಮಕ್ಕಿಯನ್ನು ನಿರ್ಬಂಧಗಳ ಸಮಿತಿಯಡಿಯಲ್ಲಿ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಮುಂದೆ 2020ರಲ್ಲಿ ಭಾರತ ಪ್ರಸ್ತಾಪ ಮಾಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚೀನಾ 2022ರ ಜೂನ್ನಲ್ಲಿ ಭಾರತದ ವಿರುದ್ದ ಕಿಡಿ ಕಾರಿತ್ತು. ಆದರೆ ಇದೀಗ ಆತನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಿದ್ದು, ಭಾರತದ ಪಾಲಿಗೆ ಜಯ ಸಿಕ್ಕಂತಾಗಿದೆ. ಆದರೆ ಇದಕ್ಕೆ ವಿರೋಧಿಸಿದ್ದ ಚೀನಾ ಇದೇ ವೇಳೆ ತೀವ್ರ ಮುಖಭಂಗ ಎದುರಿಸುವಂತಾಗಿದೆ.
ಎಲ್ಇಟಿ/ಜೆಯುಡಿ ಕಾರ್ಯಕರ್ತರೊಂದಿಗೆ ಸೇರಿ ಹಣ ಸಂಗ್ರಹ, ಹಿಂಸಾಚಾರಕ್ಕೆ ಯುವಕರ ನೇಮಕ, ಉಗ್ರ ಚಟುವಟಿಕೆಗಳಿಗೆ ಯುವಕರಿಗೆ ದುಷ್ಪ್ರೇರಣೆ ನೀಡುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗೆ ಸಂಚು ಮುಂತಾದ ವಿಚಾರಗಳನ್ನು ಈತನ ಹೆಸರು ಕೇಳಿ ಬಂದಿತ್ತು. 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ದ ಸಂಬಂಧಿ ಈತ.
2000ನೇ ಇಸವಿಯ ಡಿಸೆಂಬರ್ 22ರಂದು ನಡೆದ ಕೆಂಪುಕೋಟೆ ದಾಳಿ, 26/11 ಮುಂಬೈ ದಾಳಿ, 2018ರ ಫೆಬ್ರವರಿ 12 ಮತ್ತು 13ಕ್ಕೆ ನಡೆದ ಕರಣ್ ನಗರ, ಶ್ರೀನಗರ ದಾಳಿ, 2018ರ ಮೇ 30ರಂದು ನಡೆದ ಖಾನ್ಪೋರಾ, ಬಾರಾಮುಲ್ಲಾ ದಾಳಿ, 2018ರ ಜೂನ್ 14ರಲ್ಲಿ ನಡೆದ ಶ್ರೀನಗರ ದಾಳಿಯ ಸೇರಿದಂತೆ ವಿವಿಧ ಎಲ್ಇಟಿ ದಾಳಿಯ ಹಿಂದಿನ ರೂವಾರಿಯಾಗಿದ್ದ ಎಂದೂ ತಿಳಿದು ಬಂದಿದೆ. ಭಾರತ ಮತ್ತು ಅಮೆರಿಕಾ ಈಗಾಗಲೇ ಈತನನ್ನು ಭಯೋತ್ಪಾದಕ ಎಂದು ಪಟ್ಟಿಯಲ್ಲಿ ಸೇರಿಸಿವೆ.