ದುಬೈ, ಜ 17 (DaijiworldNews/DB): ಭಾರತದೊಂದಿಗಿನ ಯುದ್ದದಲ್ಲಿ ಪಾಕಿಸ್ತಾನಕ್ಕೆ ನಷ್ಟವಾಗಿರುವುದೇ ಹೆಚ್ಚು. ಕಾಶ್ಮೀರದಲ್ಲಿ ಇರುವ ಜ್ವಲಂತ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪ್ರಾಮಾಣಿಕ ಮಾತುಕತೆ ನಡೆಸಲು ಸಿದ್ದವಿರುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಮತ್ತು ಆಹಾರ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಜನ ಸರ್ಕಾರದ ವಿರುದ್ದ ಮಾತನಾಡುತ್ತಿರುವ ಬೆನ್ನಲ್ಲೇ ದುಬೈ ಮೂಲದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಎಲ್ಲರಿಗೂ ಶಾಂತಿಯುತವಾಗಿ ಬದುಕುವ ಜವಾಬ್ದಾರಿ ಇದೆ. ಭಾರತದೊಂದಿಗೆ ಮೂರು ಬಾರಿ ನಾವು ಯುದ್ದ ಮಾಡಿದಾಗಲೂ ದುಃಖ, ಬಡತನ, ನಿರುದ್ಯೋಗವನ್ನೇ ಜನರಿಗೆ ನೀಡಿದ್ದೇವೆ. ಈ ಅನುಭವಗಳು ಪಾಠ ಕಲಿಸಿವೆ. ನೆಮ್ಮದಿಯಿಂದ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದಿದ್ದಾರೆ.
ನಮ್ಮ ಸಮಸ್ಯೆಗಳ ಬಗೆಹರಿಸಲು ನಾವು ಖಂಡಿತಾ ಬದ್ದ. ಆ ಮೂಲಕ ಶಾಂತಿಯಿಂದ ಜೀವನ ನಡೆಸುವುದು ನಮ್ಮ ಆದ್ಯತೆ. ಸಂಪನ್ಮೂಲಗಳನ್ನು ಮದ್ದುಗುಂಡುಗಳ ದಾಳಿ ಮೂಲಕ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಹೇಳಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರತಿದಿನವೂ ಆಗುತ್ತಿದ್ದು, ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಶೋಷಣೆ ಆಗುತ್ತಿದೆ. ಸಂವಿಧಾನದ 370ನೇ ವಿಧಿ ರದ್ದತಿ ಮೂಲಕ ಕಾಶ್ಮೀರಿ ಜನರ ಹಕ್ಕುಗಳನ್ನು ಭಾರತ ಸರ್ಕಾರ ಕಸಿದುಕೊಂಡಿದೆ ಎಂದು ಇದೇ ವೇಳೆ ಅವರು ಆಪಾದಿಸಿದರು.