ಬ್ರಿಟನ್, ಜ 17 (DaijiworldNews/DB): ಬ್ರಿಟನ್ ಪ್ರಧಾನಿ ಕಾರ್ಯಾಲಯದಲ್ಲಿ ಮಕರ ಸಂಕ್ರಾತಿಯನ್ನು ಆಚರಿಸಲಾಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರ್ಯಾಲಯದ ಸಿಬಂದಿ ಹಾಗೂ ಭದ್ರತಾ ಕಚೇರಿ ಸಿಬಂದಿ ಸಹಿತ ಕಚೇರಿ ಸಂಬಂಧಿಸಿದವರು ಹಬ್ಬದೂಟ ಸವಿಯುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ.
ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತೀಯ ಕೆಲವು ಆಚರಣೆಗಳನ್ನು ಬ್ರಿಟನ್ನಲ್ಲಿ ನೆರವೇರಿಸುತ್ತಿದೆ. ಇತ್ತೀಚೆಗೆ ಅವರು ಗೋಪೂಜೆ ನೆರವೇರಿಸಿದ ವೀಡಿಯೋಗಳು ವೈರಲ್ ಆಗಿತ್ತು. ಇದೀಗ ಭಾರತದ ಮಕರ ಸಂಕ್ರಾಂತಿ (ತಮಿಳುನಾಡಿನಲ್ಲಿ ಪೊಂಗಲ್) ಹಬ್ಬವನ್ನು ಬ್ರಿಟನ್ ಪ್ರಧಾನಿ ಕಾರ್ಯಾಲಯದಲ್ಲಿ ಆಚರಿಸಲಾಗಿದೆ.
ಅಧಿಕಾರಿಗಳು ಮತ್ತು ಸಿಬಂದಿಗಾಗಿ ವಿಶೇಷ ಹಬ್ಬದೂಟ ತಯಾರಿಸಲಾಗಿತ್ತು. ನೆರೆದವರೆಲ್ಲಾ ಬಾಳೆ ಎಲೆಯಲ್ಲಿ ಹಬ್ಬದ ಊಟ ಸವಿದಿದ್ದಾರೆ. ಬಾಳೆಹಣ್ಣು, ಬೆಲ್ಲ, ಸಿಹಿ ಪೊಂಗಲ್, ಅನ್ನ, ಇಡ್ಲಿ, ಚಟ್ನಿ ಸೇರಿದಂತೆ ವಿವಿಧ ಖಾದ್ಯ ತಿನಿಸುಗಳು ಇದ್ದವು.
ಇನ್ನು ಈ ವೀಡಿಯೊವನ್ನು 68 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ವಿದೇಶದ ಪ್ರಧಾನಿ ಕಚೇರಿಯಲ್ಲಿ ಭಾರತೀಯ ಆಚರಣೆ ನೋಡುವುದು ಖುಷಿಯಾಗುತ್ತದೆ ಎಂದು ಭಾರತೀಯರು ಕಮೆಂಟ್ ಮಾಡಿದ್ದಾರೆ.