ನ್ಯೂಯಾರ್ಕ್, ಜ 22 (DaijiworldNews/DB): ಜಾಹೀರಾತುಮುಕ್ತ ಟ್ವಿಟರ್ ಸೇವೆ ಪಡೆದುಕೊಳ್ಳಲು ಟ್ವಿಟರ್ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ದುಬಾರಿ ಚಂದಾದಾರಿಕೆಯನ್ನು ಘೋಷಿಸಿದ್ದಾರೆ.
ಈ ಸಂಬಧ ಸರಣಿ ಟ್ವೀಟ್ ಮಾಡಿರುವ ಅವರು, ಟ್ವಿಟರ್ನಲ್ಲಿ ಆಗಾಗ್ಗೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಅದರೊಂದಿಗೆ ದೊಡ್ಡದಾಗಿಯೂ ಮೂಡಿ ಬರುತ್ತಿವೆ. ಹೀಗಾಗಿ ಇದಕ್ಕೆ ಪರಿಹಾರೋಪಾಯ ತೆಗೆದುಕೊಳ್ಳುವುದು ಬಳಕೆದಾರರ ದೃಷ್ಟಿಯಿಂದ ಉತ್ತಮ. ಚಂದಾದಾರಿಕೆಯನ್ನು ದುಬಾರಿ ಬೆಲೆ ತೆತ್ತು ಪಡೆದುಕೊಂಡವರಿಗೆ ಶೂನ್ಯ ಜಾಹೀರಾತು ಅನುಮತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಟ್ವಿಟರ್ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಎಲಾನ್ ಮಸ್ಕ್ ಬಳಿಕ ಟ್ವಿಟರ್ನಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿದ್ದರು. ಟ್ವಿಟರ್ ಬ್ಲೂ ಚಂದಾದಾರಿಕೆಗೆ ಶುಲ್ಕ ವಿಧಿಸುವುದು, ರಾಜಕೀಯ ಜಾಹೀರಾತುಗಳ ಮೇಲಿನ ಮೂರು ವರ್ಷಗಳ ನಿಷೇಧ ಸಡಿಲಿಕೆ, ಉದ್ಯೋಗ ಕಡಿತ ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿತ್ತು.