ಲಾಸ್ ಏಂಜಲೀಸ್, ಜ 22 (DaijiworldNews/DB): ಕಾಸ್ ಏಂಜಲೀಸ್ನಲ್ಲಿ ನಡೆದ ಚಂದ್ರನ ಹೊಸ ವರ್ಷಾಚರಣೆ ನಂತರ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿ ಒಂಬತ್ತು ಮಂದಿಯ ಸಾವಿಗೆ ಕಾರಣನಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮಾಂಟೆರಿ ಪಾರ್ಕ್ನ ಗಾರ್ವೆ ಏವ್ನಲ್ಲಿರುವ ವ್ಯಾಪಾರ ಪ್ರದೇಶದಲ್ಲಿ ಜನ ಹೊಸ ವರ್ಷಾಚರಣೆಯಲ್ಲಿ ನಿರತರಾಗಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದೆ. ವ್ಯಕ್ತಿಯೊಬ್ಬ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯ ಸಾರ್ಜೆಂಟ್ ಬಾಬ್ ಬೋಸ್ ಭಾನುವಾರ ಹೇಳಿದ್ದಾರೆ.
ಲಾಸ್ ಏಂಜಲೀಸ್ನಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿರುವ ಮಾಂಟೆರಿ ಪಾರ್ಕ್ನಲ್ಲಿ ಸುಮಾರು 60 ಸಾವಿರ ಜನಸಂಖ್ಯೆಯಿದ್ದು, ಇಲ್ಲಿರುವ ವ್ಯಾಪಾರ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಶೂಟರ್ ಮೆಷಿನ್ ಗನ್ನೊಂದಿಗೆ ಒಳ ನುಗ್ಗಿದ್ದ. ಅವನ ಬಳಿ ಮದ್ದುಗುಂಡುಗಳೂ ಇದ್ದವು ಎಂದು ವರದಿಯಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಚಂದ್ರನ ಹೊಸ ವರ್ಷದ ಕಾರ್ಯಕ್ರಮ ಇದಾಗಿದ್ದು, ಶನಿವಾರದಿಂದ ಎರಡು ದಿನಗಳ ಕಾರ್ಯಕ್ರಮ ಆರಂಭವಾಗಿತ್ತು. ಆದರೆ ಮೊದಲ ದಿನವೇ ಗುಂಡಿನ ದಾಳಿಯಿಂದಾಗಿ ಕಾರ್ಯಕ್ರಮ ಕಳೆಗುಂದಿದೆ ಎಂದು ತಿಳಿದು ಬಂದಿದೆ.