ಮೆಂಫಿಸ್, ಜ 28 (DaijiworldNews/DB): ಅಮೆರಿಕಾದಲ್ಲಿ ಪೊಲೀಸರ ಚಿತ್ರಹಿಂಸೆಯಿಂದ ಕಪ್ಪುವರ್ಣೀಯ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಪೊಲೀಸರ ಅಮಾನವೀಯ ನಡೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಟೈರ್ ನಿಕೊಲಸ್ (29) ಮೃತ ವ್ಯಕ್ತಿ. ಫೆಡ್ ಎಕ್ಸ್ನಲ್ಲಿ ಕೆಲಸ ಮಾಡುತ್ತಿದ್ದ ನಿಕೊಲಸ್ಗೆ ಪೊಲೀಸರು ಮುಖಕ್ಕೆ ಗುದ್ದಿ, ಬೂಟುಗಾಲಿನಿಂದ ತುಳಿದು, ಲಾಠಿ ಹೊಡೆತ ನೀಡಿ ಚಿತ್ರಹಿಂಸೆ ನೀಡಿದ್ದಾರೆ. ಪೊಲೀಸರು ನಿಕೊಲಸ್ ಇದ್ದ ಕಾರಿನಿಂದ ಆತನನ್ನು ಹೊರಗೆಳೆದಾಗ ಆತ ತಾನೇನು ತಪ್ಪು ಮಾಡಿಲ್ಲ ಎಂದಿದ್ದಾನೆ. ಆದರೂ ಪೊಲೀಸರ ಗುಂಪು ಆತನನ್ನು ಸುತ್ತುಗಟ್ಟಿ ಥಳಿಸಿದೆ. ಈ ವೇಳೆ ಆತನನ್ನು ಹಿಡಿದುಕೊಂಡಿದ್ದ ಪೊಲೀಸ್ ಗುಂಡು ಹೊಡೆಯಲು ಹೇಳಿದ್ದು, ಮತ್ತೊಬ್ಬ ಗುಂಡು ಹಾರಿಸಿದ್ದಾನೆ. ತತ್ಕ್ಷಣ ಆತ ಓಡಿದ್ದಾನೆ.
ಆತ ಓಡಿದಾಗ ಆತನನ್ನು ಬೆನ್ನಟ್ಟಿ ಕಾರಿಗೆ ಒರಗಿಸಿ ಥಳಿಸಿದ್ದಾರೆ. ಪೊಲೀಸರ ಹಿಂಸೆ ತಾಳಲಾರದೆ ನಿಕೊಲಸ್ ಮೃತಪಟ್ಟಿದ್ದಾನೆ. ಪೊಲೀಸರು ಈ ಅಮಾನವೀಯ ನಡೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಯುವುದಕ್ಕೂ ಮುನ್ನ ಆತ ಮಾಮ್ ಎಂದು ಹಲವು ಬಾರಿ ಕೂಗಿರುವುದು ಜನರ ಮನ ಕಲಕಿದೆ. ಇನ್ನು ನಿಕೊಲಸ್ ಸಾವಿಗೆ ಕಾರಣವಾಗಿರುವ ಪೊಲೀಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕಾ ಜನರು ಒತ್ತಾಯಿಸಿದ್ದಾರೆ.
ಇನ್ನು ನಿಕೊಲಸ್ ಸಾವಿಗೆ ದೇಶದ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿದೆ. ಆದರೆ ಈ ವೇಳೆ ನಿಕೊಲಸ್ ತಾಯಿ ಶಾಂತಿಗಾಗಿ ಮನವಿ ಮಾಡಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸಿ. ಯಾವುದೇ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಘಟನೆ ಸಂಬಂಧ ಅಮೆರಿಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರಸ್ತಾಪಿಸುವುದರೊಂದಿಗೆ ಪೊಲೀಸ್ ಹಿಂಸಾಚಾರಕ್ಕೆ ಕಡಿವಾಣ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿಕೊಲಸ್ ತಾಯಿಗೆ ಭರವಸೆ ನೀಡಿದ್ದಾರೆ. ಜಾರ್ಜ್ಫ್ಲಾಯ್ಡ್ ಕಾಯ್ದೆಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು. ಇದರಿಂದ ಪೊಲೀಸರು ನಡೆಸುವ ಹಿಂಸಾಚಾರ ನಿಯಂತ್ರಣಕ್ಕೆ ಬರಲಿದೆ ಎಂದಿದ್ದಾರೆ.