ಬ್ರಿಟನ್, ಜ 30( DaijiworldNews/MS): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮದೇ ಪಕ್ಷದ ಮುಖ್ಯಸ್ಥ ಮತ್ತು ಕ್ಯಾಬಿನೆಟ್ ಸಚಿವ (ಖಾತೆ ರಹಿತ)ನದೀಮ್ ಝಹಾವಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.
ನದೀಮ್ ಅವರು ವೈಯಕ್ತಿಕ ತೆರಿಗೆ ಪಾವತಿಯಲ್ಲಿ ಪ್ರಮಾದ ಎಸಗಿದ್ದ ಆರೋಪ ಹೊಂದಿದ್ದರು. ಸ್ವತಂತ್ರ ತನಿಖೆಯಲ್ಲಿ ನದೀಮ್ ಅವರ ವಿರುದ್ದದ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಮೂಲತಃ ಇರಾಕ್ ನವರಾದ ನದೀಮ್ ಅವರ ವಿರುದ್ದ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು.
ನದೀಮ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರನ್ನು ಉದ್ದೇಶಿಸಿ ಸುನಕ್ ಬರೆದಿರುವ ಅಧಿಕೃತ ಪತ್ರದಲ್ಲಿ, ’ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ, ಸರ್ಕಾರವನ್ನು ಎಲ್ಲಾ ಹಂತದಲ್ಲೂ ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ ಮತ್ತು ಹೊಣೆಗಾರಿಕೆಯಿಂದ ಮುನ್ನಡೆಸುವುದಾಗಿ ಶಪಥ ತೆಗೆದುಕೊಂಡಿದ್ದೆ' ಎಂದು ಬರೆದಿದ್ದಾರೆ.