ಇಸ್ಲಾಮಾಬಾದ್, ಫೆ 01 (DaijiworldNews/HR): ಶ್ರೀಲಂಕಾ ಮಾದರಿಯಲ್ಲೇ ಪಾಕಿಸ್ತಾನಕ್ಕೆ ಈಗ ಆರ್ಥಿಕವಾಗಿ ದಿವಾಳಿಯಾಗುವ ಭೀತಿ ಆರಂಭವಾಗಿರುವುದಾಗಿ ವರದಿಯಾಗಿದೆ.
ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಅಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿ, ಪರಿಸ್ಥಿತಿಯ ಅವಲೋಕನ ಮಾಡಲು ಪ್ರಾರಂಭ ಮಾಡಿದ್ದಾರೆ. ಇದರ ಬೆನ್ನಲ್ಲೇ ಪಾಕ್ ಅರ್ಥಶಾಸ್ತ್ರಜ್ಞರಿಂದ, ಜನನಾಯಕರಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಪಾಕಿಸ್ತಾನದ ರೂಪಾಯಿ ಮೌಲ್ಯ ತೀರಾ ಕುಸಿದಿದ್ದು, ಹಣದುಬ್ಬರ ವಿಪರೀತ ಹೆಚ್ಚಾಗಿದೆ. ಇಂಧನ ಪೂರೈಕೆ ಕಡಿಮೆಯಾಗಿದೆ. ಮಾತ್ರವಲ್ಲ ಡಾಲರ್ ಎದುರು ಅದರ ರೂಪಾಯಿ ಪೂರ್ಣವಾಗಿ ನೆಲಕಚ್ಚಿದೆ.
ಪಾಕಿಸ್ತಾನಕ್ಕೆ ಇತರೆ ದೇಶಗಳು ಷರತ್ತುರಹಿತವಾಗಿ ನೆರವು ನೀಡಲು ಮುಂದೆ ಬರುತ್ತಿಲ್ಲ. ಜೊತೆಗೆ ಐಎಂಎಫ್ ಕೂಡ ನೆರವು ಬೇಕಾದರೆ ತೆರಿಗೆಗಳನ್ನು ಏರಿಸಬೇಕು, ಸಬ್ಸಿಡಿ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಹೇಳಿದೆ. ಅದಕ್ಕೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಚುನಾವಣಾ ಹಿನ್ನೆಲೆಯಲ್ಲಿ ಒಪ್ಪಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಈ ಷರತ್ತುಗಳಿಗೆ ತಲೆಬಾಗುವ ಸ್ಥಿತಿ ಎದುರಾಗಿದೆ.