ವಾಷಿಂಗ್ಟನ್, ಫೆ 02 (DaijiworldNews/DB): ಅಮೆರಿಕ ಸೇರಿದಂತೆ ಜಗತ್ತಿಗೆ ಬೆದರಿಕೆಯೊಡ್ಡುತ್ತಿರುವ ಚೀನಾದ ನಡವಳಿಕೆ ಬಗ್ಗೆ ಪರಿಶೀಲಿಸಲು ನೂತನವಾಗಿ ರಚನೆಗೊಂಡಿರುವ ಅಮೆರಿಕ ಸಂಸತ್ತಿನ ಸದನ ಸಮಿತಿ ಸದಸ್ಯರಾಗಿ ಭಾರತೀಯ ಮೂಲದ, ಅಮೆರಿಕದ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಅವರು ನೇಮಕಗೊಂಡಿದ್ದಾರೆ.
ಈ ಸಂಬಂಧ ಬುಧವಾರ ಅಮೆರಿಕದ ಪ್ರಜಾಪ್ರತಿನಿಧಿ ಸಭೆಯ ನಾಯಕ ಹಕೀಮ್ ಜೆಫ್ರೀಸ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಇನ್ನು ರಾಜಾ ಕೃಷ್ಣಮೂರ್ತಿ ಅವರೊಂದಿಗೆ ಭಾರತ ಮೂಲದ ಇನ್ನೊಬ್ಬ ಕಾಂಗ್ರೆಸ್ ಸದಸ್ಯರಾದ ರೋ ಖನ್ನಾ ಅವರೂ ನೇಮಕಗೊಂಡಿದ್ದಾರೆಂದು ತಿಳಿದು ಬಂದಿದೆ.
ಇನ್ನು ತಮ್ಮ ನೇಮಕದ ಕುರಿತಂತೆ ಸಂಸತ ಹಂಚಿಕೊಂಡಿರುವ ರಾಜಾ ಕೃಷ್ಣಮೂರ್ತಿ, ಅಮೆರಿಕಾ ಮತ್ತು ಜಗತ್ತಿಗೇ ಬೆದರಿಕೆ ಹಾಕುತ್ತಿರುವ ಚೀನಾದ ನಡವಳಿಕೆ ಹಾಗೂ ಎರಡು ರಾಷ್ಟ್ರಗಳ ನಡುವಿನ ಕಾರ್ಯತಂತ್ರವನ್ನು ಪರಿಶೀಲಿಸಲು ರಚನೆಗೊಂಡ ಸಮಿತಿಗೆ ನನ್ನನ್ನು ನೇಮಕ ಮಾಡಿರುವುದು ಖುಷಿ ತಂದಿದೆ. ಇದಕ್ಕಾಗಿ ನಾನು ಹಕೀಮ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಅಮೆರಿಕಾದ ನೂರಾರು ಶತಕೋಟಿ ಡಾಲರ್ ಮೌಲ್ಯದ ಬೌದ್ದಿಕ ಆಸ್ತಿಯನ್ನು ಚೀನಾ ಕಳವು ಮಾಡಿದೆ. ಇನ್ನು ಆ ರಾಷ್ಟ್ರವು ಅಮೆರಿಕಾ ಸೇರಿದಂತೆ ವಿಶ್ವದ ಪ್ರಜಾಪ್ರಭುತ್ವಕ್ಕೆ ಆರ್ಥಿಕ ಹಾಗೂ ಭದ್ರತೆ ವಿಚಾರವಾಗಿ ಬೆದರಿಕೆ ಒಡ್ಡುತ್ತಲೇ ಬಂದಿದೆ ಎಂದರು.