ಲ್ಯಾನ್ಕೆಸ್ಟರ್, ಫೆ 03 (DaijiworldNews/DB): ಬರೋಬ್ಬರಿ 7.3 ಕೆ.ಜಿ. ತೂಕ, 2 ಅಡಿ ಉದ್ದ ಹೊಂದಿರುವ ಶಿಶುವಿಗೆ ಬ್ರೆಜಿಲ್ನ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ. ಇನ್ನು ಈ ಶಿಶು ಬ್ರೆಜಿಲ್ನಲ್ಲಿ ಜನಸಿದ ಇದುವರೆಗಿನ ಮಕ್ಕಳ ಪೈಕಿ ಅತಿ ಹೆಚ್ಚು ತೂಕದ ಮಗು ಎಂಬ ದಾಖಲೆ ಮಾಡಿದೆ.
ಪಾರಿಂಟಿನ್ಸ್ ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಈ ಮಗು ಜನಿಸಿದ್ದು, ಮಗುವಿಗೆ ಆಂಗರ್ಸನ್ ಸ್ಯಾಂಟೋಸ್ ಎಂದು ನಾಮಕರಣ ಮಾಡಲಾಗಿದೆ. 2016ರಲ್ಲಿ 6.8 ಕೆ.ಜಿ. ಮಗು ಜನಿಸುವ ಮೂಲಕ ಬ್ರೆಜಿಲ್ನ ಅತ್ಯಂತ ತೂಕದ ಮೊದಲ ಮಗು ಎಂಬ ದಾಖಲೆ ಸೃಷ್ಟಿಸಿತ್ತು. ಆದರೆ ಇದೀಗ ಆಂಗರ್ಸನ್ ಆ ದಾಖಲೆ ಮುರಿದಿದೆ.
ಇನ್ನು ವಿಶ್ವದಲ್ಲಿ ಈ ಹಿಂದೆ ಇಟಲಿಯಲ್ಲಿ ಇದಕ್ಕಿಂತಲೂ ಅಧಿಕ ಕೆಜಿ ತೂಕದ ಮಗು ಜನನವಾಗಿತ್ತು. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಮಗು ಜನ್ಮ ತಳೆದಿತ್ತು. ಸಾಮಾನ್ಯವಾಗಿ ಜನನ ಸಮಯದಲ್ಲಿ ಗಂಡು ಮಗುವಿನ ತೂಕ 3.3 ಕೆಜಿ ಹಾಗೂ ಹೆಣ್ಣು ಮಗುವಿನ ತೂಕ 3.2 ಕೆಜಿವರೆಗೆ ಇರುತ್ತದೆ.