ಟರ್ಕಿ, ಫೆ 08 (DaijiworldNews/DB): ಭೂಕಂಪನದಿಂದ ನಲುಗಿರುವ ಟರ್ಕಿ-ಸಿರಿಯಾದ ಜನರ ಸ್ಥಿತಿ ಪ್ರತಿಯೊಬ್ಬರ ಮನಕಲಕುವಂತಿದೆ. ಅದರಲ್ಲೂ ಪ್ರಸ್ತುತ ವೈರಲ್ ಆಗುತ್ತಿರುವ ಫೋಟೋವೊಂದು ಪುಟ್ಟ ಮಗುವಿನ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಂತಿದೆ.
ಭೂಕಂಪನದಿಂದಾಗಿ ಕುಸಿತಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ಬಾಕಿಯಾಗಿದ್ದಾರೆ. ಈ ವೇಳೆ ತನ್ನ ತಮ್ಮನಿಗೆ ಏನೂ ಆಗದಿರಲೆಂದು ಅಕ್ಕ ತನ್ನ ಕೈಯನ್ನು ರಕ್ಷಣಾತ್ಮಕವಾಗಿ ಚಾಚಿಕೊಂಡು ಅದರ ಮೇಲೆ ತಮ್ಮನ ತಲೆ ಇಟ್ಟಿರುವ ಫೋಟೋ ಮನಕಲಕುವಂತಿದೆ. ಅತ್ಯಂತ ಕಷ್ಟದ ಸಮಯದಲ್ಲಿಯೂ 7 ವರ್ಷದ ಈ ಪುಟ್ಟ ಬಾಲಕಿ ತನ್ನ ತಮ್ಮನ ರಕ್ಷಣೆಯ ಜವಾಬ್ದಾರಿ ಹೊತ್ತ ಈ ಫೋಟೋ ಭಾವನಾತ್ಮಕವಾಗಿದೆ.
ಫೋಟೋವನ್ನು ವಿಶ್ವಸಂಸ್ಥೆ ಪ್ರತಿನಿಧಿ ಮೊಹಮ್ಮದ್ ಸಫಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಕ್ಕ ಮತ್ತು ತಮ್ಮ 17 ಗಂಟೆ ಕಾಲ ಈ ಸ್ಥಿತಿಯಲ್ಲಿ ಕಳೆದಿದ್ದಾರೆ. ಬಳಿಕ ಅವರಿಬ್ಬರನ್ನೂ ರಕ್ಷಿಸಲಾಯಿತು ಎಂದು ತಿಳಿಸಿದ್ದಾರೆ.
ಸಾವು, ಕಟ್ಟಡ ಕುಸಿತಗಳಂತಹ ನಕಾರಾತ್ಮಕ ಫೋಟೋಗಳನ್ನೇ ನಾವು ಶೇರ್ ಮಾಡುತ್ತೇವೆ. ಆದರೆ ಇಂತಹ ಫೋಟೋಗಳನ್ನು ಶೇರ್ ಮಾಡುವುದನ್ನು ಮರೆಯಬಾರದು ಎಂದವರು ಇದೇ ವೇಳೆ ಬರೆದುಕೊಂಡಿದ್ದಾರೆ. ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಜಕ್ಕೂ ಇದೊಂದು ಪವಾಡ ಎಂದು ನೆಟ್ಟಿಗರು ಬರೆದಿದ್ದಾರೆ. ಆ ಬಾಲಕಿ ಪುಟ್ಟ ಹೀರೋ ಎಂಬುದಾಗಿಯೂ ಕಮೆಂಟ್ ಮಾಡಿದ್ದಾರೆ.