ಜಕಾರ್ತ, ಫೆ 09 (DaijiworldNews/DB): ಟರ್ಕಿ, ಸಿರಿಯಾ ಬಳಿಕ ಇದೀಗ ಇಂಡೋನೇಷ್ಯಾದಲ್ಲಿಯೂ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಗುರುವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ ನಾಲ್ವರು ಜೀವ ಕಳೆದುಕೊಂಡಿದ್ದಾರೆ.
ಇಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಮನೆಗಳು, ರೆಸ್ಟೋರೆಂಟ್ಗಳು ಸೇರಿದಂತೆ ವಿವಿಧ ಕಟ್ಟಡಗಳು ಹಾನಿಗೊಂಡಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸದ್ಯ ಭೂಕಂಪನದ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಗುರುವಾರ ಮಧ್ಯಾಹ್ನ 1.28ರ ವೇಳೆಗೆ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಾಂತೀಯ ರಾಜಧಾನಿ ಜಯಪುರದ ನೈಋತ್ಯಕ್ಕೆ 1 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಮೊದಲು ದೊಡ್ಡದಾದ ಕಂಪನದ ಅನುಭವವಾಗಿದ್ದು, ಆನಂತರ ಪದೇಪದೇ ಕಂಪನದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿರುವುದಾಗಿ ತಿಳಿದು ಬಂದಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಸಂಭವಿಸಿದ ಭೂಕಂಪದಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣಹಾನಿ ಜೊತೆಗೆ ಸಾಕಷ್ಟು ಆಸ್ತಿಪಾಸ್ತಿ ಹಾನಿ ಸಂಭವಿಸಿತ್ತು. ಮನೆಗಳು, ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿದ್ದವು.