ಕಹ್ರಾಮನ್ಮರಸ್, ಫೆ 10 (DaijiworldNews/DB): ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡವರನ್ನು ರಕ್ಷಿಸಲು ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನವನ್ನು ಟರ್ಕಿ ಅಧ್ಯಕ್ಷರ ಶತಮಾನದ ದುರಂತ ಎಂದು ಕರೆದಿದ್ದಾರೆ. ಸುಮಾರು 13.5 ಮಿಲಿಯನ್ ಮಂದಿ ಘಟನೆಯಲ್ಲಿ ಅತಂತ್ರರಾಗಿದ್ದಾರೆ. ಭೂಕಂಪನದಿಂದಾಗಿ 21 ಸಾವಿರ ಮಂದಿ ಈವರೆಗೆ ಜೀವ ಕಳೆದುಕೊಂಡಿರುವ ಬಗ್ಗೆ ಸಂಖ್ಯೆ ಲಭ್ಯವಾಗಿದ್ದು, ಆದರೆ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದು, ಕೊನೆ ಹಂತದ ಕಾರ್ಯಾಚರಣೆ ನಡೆಯುತ್ತಿದೆ.
ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿರುವ ತನ್ನ ಪುತ್ರಿಯ ಕೈ ಹಿಡಿದುಕೊಂಡು ಮೌನವಾಗಿ ರೋಧಿಸುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಕಲಕುವಂತಿದೆ. ಆರು ವರ್ಷದ ಬಾಲಕಿಯನ್ನು ಎನ್ಡಿಆರ್ಎಫ್ ತಂಡ ಬದುಕಿಸಿದ್ದಾರೆ. ಬದುಕುಳಿದವರ ಪೈಕಿ ಓರ್ವ ತನ್ನ ಮನೆಗೆ ಹೋಗಿ ಹೇಗೆ ಮಲಗುವುದು, ನನ್ನ ಸಹೋದರ ಜೀವಂತವಾಗಿದ್ದಾನೆಯೇ ಎಂದು ಕೇಳುವ ದೃಶ್ಯ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ. ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು.