ಅಂಕಾರ, ಫೆ 12 (DaijiworldNews/DB): ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಅವಶೇಷಗಳಡಿ ಸಿಲುಕಿದ್ದ ಹಸುಗೂಸೊಂದನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಲಾಗಿದೆ. ಬರೋಬ್ಬರಿ 128 ಗಂಟೆಗಳ ಬಳಿಕ ಈ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಶಿಶು ಬದುಕಿ ಬಂದಿದೆ.
ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಈವರೆಗೆ 28 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 6 ಸಾವಿರಕ್ಕೂ ಅಧಿಕ ಕಟ್ಟಡಗಳು ಕುಸಿತಗೊಂಡಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಎರಡು ತಿಂಗಳ ಮಗುವೊಂದು ಬರೋಬ್ಬರಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದು, ಕೊನೆಗೂ ಬದುಕಿ ಬಂದಿದೆ. ಐದು ದಿನಗಳಿಗೂ ಹೆಚ್ಚು ಕಾಲ ಈ ಮಗು ಅವಶೇಷಗಳಡಿಯೇ ಸಿಲುಕಿಕೊಂಡು ಬದುಕಿಗಾಗಿ ಹಂಬಲಿಸುತ್ತಿತ್ತು. ಕೊನೆಗೂ ಅದನ್ನು ರಕ್ಷಿಸುವಲ್ಲಿ ರಕ್ಷಣಾ ಕಾರ್ಯಾಚರಣೆ ಸಿಬಂದಿ ಯಶಸ್ವಿಯಾಗಿದ್ದಾರೆ.
ಟರ್ಕಿಯಲ್ಲಿನ ಹೆಪ್ಪುಗಟ್ಟುವ ಚಳಿಯ ನಡುವೆಯೇ ಅವಶೇಷಗಳಡಿ ಬಾಕಿಯಾದ ಹಲವರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ಐದು ದಿನಗಳ ನಂತರ ಎರಡು ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಹಾಗೂ 70 ವರ್ಷದ ವೃದ್ದೆಯನ್ನೂ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಅವಶೇಷಗಳಡಿ ಸಿಲುಕಿದ್ದ 40 ವರ್ಷದ ಮಹಿಳೆಯನ್ನು 104 ಗಂಟೆಗಳ ಬಳಿಕ ಹೊರ ತೆಗೆಯಲಾಗಿತ್ತಾದರೂ, ಆಕೆ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದರು.