ಅಮೆರಿಕ,ಮಾ14:ಅಮೆರಿಕದಲ್ಲಿ ಬುಧವಾರ ಬೀಸಿದ ಹಿಮಬಿರುಗಾಳಿಗೆ ಗುಡ್ಡಗಾಡು,ಬಯಲುಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಶೇಖರಣೆಯಾಗಿದ್ದ ಹಿನ್ನಲೆ 1,300ಕ್ಕೂ ಅಧಿಕ ವಿಮಾನಯಾನಗಳು ಸ್ಥಗಿತಗೊಂಡಿದೆ.
ರಸ್ತೆಗಳ ಮಧ್ಯೆಯೂ ಹಿಮ ಶೇಖರಣೆಯಾಗಿದ್ದು, ವಾಹನ ಸಂಚಾರವೂ ಸ್ಥಗಿತಗೊಂಡಿದೆ. ಕೊಲರಾಡೊ ಗವರ್ನರ್ ಜಾನ್ ಹಿಕನ್ಲೂಪರ್, ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ನೆರವು ನೀಡುವುದಕ್ಕಾಗಿ ಸ್ಟೇಟ್ ನ್ಯಾಶನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗಿದೆ.
ಕೊಲರಾಡೊ, ವ್ಯೋಮಿಂಗ್, ನೆಬ್ರಾಸ್ಕ ಮತ್ತು ಡಕೋಟ ರಾಜ್ಯಗಳ ಹಲವು ಭಾಗಗಳಿಗೆ ರಾಷ್ಟ್ರೀಯ ಹವಾಮಾನ ಕೇಂದ್ರ ಹಿಮಬಿರುಗಾಳಿಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ. ಮನೆಯಿಂದ ಹೊರಗೆ ಬಾರದಂತೆ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.