ನ್ಯೂಜಿಲೆಂಡ್, ಫೆ 14 (DaijiworldNews/MS): ನ್ಯೂಜಿಲೆಂಡ್ ದೇಶದಲ್ಲಿ ಗೇಬ್ರಿಯೆಲ್ ಚಂಡಮಾರುತವು ಅಬ್ಬರಿಸುತ್ತಿದ್ದು ಉತ್ತರ ಭಾಗವನ್ನು ಜರ್ಜರಿತಗೊಳಿಸಿದ್ದು ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಸರ್ಕಾರವು ಮಂಗಳವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಭಾನುವಾರ ಬೆಳಗ್ಗೆ ನ್ಯೂಜಿಲೆಂಡ್ನ ಉತ್ತರ ಭಾಗಕ್ಕೆ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಜೋರು ಗಾಳಿ ಬೀಸುತ್ತಿದ್ದು, ವ್ಯಾಪಕ ಮಳೆ ಸುರಿಯುತ್ತಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾಗಿದ್ದು ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗಿವೆ .
ಅತಿದೊಡ್ಡ ನಗರವಾದ ಆಕ್ಲೆಂಡ್ ಬಳಿ ರಾತ್ರಿಯಿಡೀ ಸಂಭವಿಸಿದ ಭೂಕುಸಿತದಲ್ಲಿ ಸಿಕ್ಕಿಬಿದ್ದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಮತ್ತು ಇನ್ನೊಬ್ಬರನ್ನು ಗಂಭೀರ ಗಾಯಗಳೊಂದಿಗೆ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಕ್ಲೆಂಡ್, ನಾರ್ತ್ಲ್ಯಾಂಡ್ ಗಿಸ್ಬೋರ್ನ್, ಹಾಕ್ಸ್ ಬೇ ಸೇರಿದಂತೆ ಮೊದಲಾದ ಪ್ರದೇಶಗಳಲ್ಲಿ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 2 ಲಕ್ಷ ಮನೆಗಳಿಗೆ ತೊಂದರೆಯಾಗಿದ್ದು, 5 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ.
ರಾಷ್ಟ್ರೀಯ ತುರ್ತು ಘೋಷಣೆಯು ಪೀಡಿತ ಪ್ರದೇಶಗಳನ್ನು ಬೆಂಬಲಿಸಲು ಮತ್ತು ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರವನ್ನು ಶಕ್ತಗೊಳಿಸುತ್ತದೆ ಎಂದು ತುರ್ತು ನಿರ್ವಹಣಾ ಸಚಿವ ಕೀರನ್ ಮ್ಯಾಕ್ಅನುಲ್ಟಿ ಹೇಳಿದ್ದಾರೆ.