ವಾಷಿಂಗ್ಟನ್, ಫೆ 15 (DaijiworldNews/DB): ಟ್ವಿಟರ್ ಸಂಸ್ಥೆಯ ಸಿಇಒ ಆಗಿ ಹೊಸಬರು ನೇಮಕಗೊಂಡಿದ್ದಾರೆ. ಆತ ಬೇರಾರು ಅಲ್ಲ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಮುದ್ದಿನ ಸಾಕುನಾಯಿ!
ಹೌದು. ಎಲಾನ್ ಮಸ್ಕ್ ಅವರೇ ಟ್ವೀಟ್ ಮಾಡಿ ಬುಧವಾರ ಈ ವಿಷಯ ತಿಳಿಸಿದ್ದು, ಸಿಇಒ ಖುರ್ಚಿಯಲ್ಲಿ ಕುಳಿತಿರುವ ತಮ್ಮ ಸಾಕುನಾಯಿಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಟ್ವಿಟರ್ ಸಂಸ್ಥೆಯ ನೂತನ ಸಿಇಒ ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ಶಿಬಾ ಇನು ತಳಿಯ ನಾಯಿ ಇದಾಗಿದ್ದು, ಫ್ಲೋಕಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಸಿಇಒ ಕುರ್ಚಿಯಲ್ಲಿ ಆತನನ್ನು ಕುಳ್ಳಿರಿಸಿದ್ದಲ್ಲದೆ ಆತನಿಗೆ ಸಿಇಒ ಎಂದು ಬರೆದಿರುವ ಕಪ್ಪು ಬಣ್ಣದ ಟಿ ಶರ್ಟ್ ಕೂಡಾ ಹಾಕಲಾಗಿದೆ. ಆತನ ಮುಂದೆ ವಿವಿಧ ಫೈಲ್ಗಳನ್ನೂ ಇಡಲಾಗಿದೆ. ಸದ್ಯ ಮಸ್ಕ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮಸ್ಕ್ ಟ್ವಿಟರ್ನ್ನು ಖರೀದಿಸುವುದಕ್ಕೂ ಮುನ್ನ ಭಾರತ ಮೂಲದ ಪರಾಗ್ ಅಗರವಾಲ್ ಅವರು ಟ್ವಿಟರ್ನ ಸಿಇಒ ಆಗಿದ್ದರು. ಮಸ್ಕ್ ಒಡೆತನಕ್ಕೆ ಟ್ವಿಟರ್ ಬಂದ ಬಳಿಕ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅಲ್ಲದೆ, ಹಲವು ಉನ್ನತ ಸ್ಥಾನದ ಉದ್ಯೋಗಿಗಳನ್ನೂ ವಜಾಗೊಳಿಸಲಾಗಿತ್ತು.