ಕಾಬೂಲ್ ಫೆ 17 (DaijiworldNews/MS): ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ತೆಗೆದುಕೊಳ್ಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ.
ಮಹಿಳೆಯರು ಸೇವಿಸುತ್ತಿರುವ ಗರ್ಭನಿರೋಧಕ ಮತ್ತು ಕುಟುಂಬ ಯೋಜನೆಗಳ ಬಳಕೆಯು ಮುಸ್ಲಿಂ ಜನಸಂಖ್ಯೆಯನ್ನು 'ನಿಯಂತ್ರಿಸಲು' ರೂಪಿಸಲಾದ 'ಪಾಶ್ಚಿಮಾತ್ಯ ಪಿತೂರಿ' ಎಂದು ಗುಂಪು ಹೇಳಿಕೊಂಡಿದೆ.ಜತೆಗೆ ಎರಡು ನಗರಗಳಲ್ಲಿ ಅವುಗಳ ಮಾರಾಟ ಮಾಡದೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ತಾಲಿಬಾನ್ ಗರು ಆರೋಗ್ಯ ಕಾರ್ಯಕರ್ತರನ್ನು ಬೆದರಿಸುತ್ತಿದ್ದು ಫಾರ್ಮಸಿಗಳಿಗೆ ನುಗ್ಗಿ ತಪಾಸಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಬೂಲ್ನಲ್ಲಿ ಇರುವ ಮಳಿಗೆಯ ಮಾಲೀಕ ನೀಡಿದ ಮಾಹಿತಿಯಂತೆ “ಇಬ್ಬರು ಬಂದೂಕುಧಾರಿಗಳು ಎರಡು ಬಾರಿ ನನ್ನ ಅಂಗಡಿಗೆ ಎಂದು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು ಮಾರಾಟ ಮಾಡಲೇಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ನನ್ನ ಬಳಿ ಇರುವ ಔಷಧಗಳ ಸಂಗ್ರಹವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ"ಎಂದು ಹೇಳಿದ್ದಾನೆ.
"ಜನಸಂಖ್ಯೆಯನ್ನು ನಿಯಂತ್ರಿಸುವ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಪ್ರಚಾರ ಮಾಡಲು ಅನುಮತಿಸಲಾಗುವುದಿಲ್ಲ" ಎಂದು ಬೆದರಿಕೆ ಹಾಕಿರುವುದನ್ನು ಸೂಲಗಿತ್ತಿಯೊಬ್ಬರು ಹೇಳಿಕೊಂಡಿದ್ದಾರೆ.