ಬಲ್ಗೇರಿಯಾ, ಫೆ 18 (DaijiworldNews/MS): ಬಲ್ಗೇರಿಯಾದ ರಾಜಧಾನಿ ಸೋಫಿಯಾದ ಹೊರವಲಯದಲ್ಲಿ ಶವಗಳಿದ್ದ ಟ್ರಕ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆರಂಭಿಕ ಮಾಹಿತಿಯ ಪ್ರಕಾರ, ಟ್ರಕ್ನಲ್ಲಿ ಸುಮಾರು 40 ವಲಸಿಗರು ಪ್ರಯಾಣಿಸುತ್ತಿದ್ದರು. ಟ್ರಕ್ ನಲ್ಲಿದ್ದ 40 ಜನರಲ್ಲಿ 18 ಜನರು ಆಹಾರ/ ಆಮ್ಲಜನಕವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬದುಕುಳಿದವರ ಸ್ಥಿತಿಯೂ ಗಂಭೀರವಾಗಿದ್ದು, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಇವರೆಲ್ಲರೂ ಅಪ್ಘಾನಿಸ್ತಾನದಿಂದ ವಲಸೆ ಬಂದ ಕಾರ್ಮಿಕರಗಿದ್ದಾರೆ. ಎಂದು ಸ್ಥಳೀಯ ಮಾಧ್ಯಮಗಳು ಬಹಿರಂಗಪಡಿಸಿವೆ. ಕೆಲ ದಿನಗಳ ಹಿಂದೆ ಅಪರಿಚಿತರು ಈ ಟ್ರಕ್ ಅನ್ನು ಇಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
"ವಾಹನ ಮರದ ದಿಮ್ಮಿ ಲೋಡ್ ಮಾಡಲಾಗಿದ್ದು ಕೆಳಗೆ ರಹಸ್ಯ ವಿಭಾಗದಲ್ಲಿ ವಲಸಿಗರನ್ನು ಸಾಗಾಣೆ ಮಾಡಲಾಗುತ್ತಿತ್ತು.ಇದು ದೇಶದಲ್ಲಿ ದಾಖಲಾದ ಮಾರಣಾಂತಿಕ ಕಳ್ಳಸಾಗಾಣಿಕೆ ಘಟನೆಗಳಲ್ಲಿ ಒಂದಾಗಿದೆ. ಏನಾಯಿತು ಎಂದು ನಾನು ಖಚಿತವಾಗಿ ಹೇಳಲಾರೆ. ಆಮ್ಲಜನಕದ ಕೊರತೆ ಇದ್ದು, ಅವರೆಲ್ಲರೂ ಒದ್ದೆಯಾಗಿದ್ದರು. ಅವರು ಕೆಲವು ದಿನಗಳಿಂದ ಏನನ್ನೂ ತಿಂದಿರಲಿಲ್ಲ ಎಂದು ಖಂಡಿತವಾಗಿಯೂ ಹೇಳಬಲ್ಲೆ. ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿರುವವರೂ ಸೇರಿದಂತೆ ಟ್ರಕ್ನಲ್ಲಿ ಇನ್ನೂ ಜೀವಂತವಾಗಿ ಕಂಡುಬಂದ ಹದಿನಾಲ್ಕು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಹತ್ತು ಜನರು ಸಮೀಪದ ಪೊದೆಸಸ್ಯಗಳಲ್ಲಿ ಅಡಗಿರುವುದು ಕಂಡುಬಂದಿದ್ದು ಅವರನ್ನು ಪರೀಕ್ಷೆಗಾಗಿ ಕರೆದೊಯ್ಯಲಾಗಿದೆ" ಎಂದು ಆರೋಗ್ಯ ಸಚಿವ ಅಸೆನ್ ಮೆಡ್ಜಿಡೀವ್ ಹೇಳಿದ್ದಾರೆ.