ಕ್ರೈಸ್ಟ್ ಚರ್ಚ್,ಮಾ 16 (MSP): ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ 1.40 ( ಭಾರತೀಯ ಸಮಯ ಬೆಳಗ್ಗೆ 6.10) ಎರಡು ಮಸೀದಿಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ 49 ಮಂದಿ ಮೃತಪಟ್ಟಿದ್ದು ಇವರಲ್ಲಿ 10 ಮಂದಿ ಭಾರತೀಯರು ಇರಬಹುದು ಎಂದು ಶಂಕಿಸಲಾಗಿದೆ. ಘಟನೆಯಿಂದ 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದಾಳಿಯ ನಂತರ ಭಾರತೀಯ ಮೂಲದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ಸಂಜೀವ್ ಕೊಹ್ಲಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ತಕ್ಷಣಕ್ಕೆ ಸಿಕ್ಕ ಮಾಹಿತಿ ಇದಾಗಿದ್ದು, ಅಧಿಕೃತ ಮಾಹಿತಿಯ ನಿರೀಕ್ಷೆಯಲ್ಲಿರುವುದಾಗಿ ಸಂಜೀವ್ ತಿಳಿಸಿದ್ದಾರೆ.
ಈ ನಡುವೆ, ದಾಳಿಗೆ ಭಾರತದ ಹೈದರಾಬಾದ್ ಮೂಲದ ಆಹ್ಮದ್ ಇಕ್ಬಾಲ್ ಜಹಾಂಗೀರ್ ಎಂಬವರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ತುತ್ತಾಗಿದ್ದ ಅಹ್ಮದ್ ಇಕ್ಬಾಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಂತವಾಗಿರುವ ನ್ಯೂಜಿಲೆಂಡ್ ನಲ್ಲಿ ಮುಸ್ಲಿಂರ ಮೇಲೆ ನಡೆದ ಅತಿ ಭಯಾನಕ ದಾಳಿ ಇದಾಗಿದ್ದು, ಘಟನೆಯಿಂದ ನ್ಯೂಜಿಲೆಂಡ್ ದೇಶವೇ ತಲ್ಲಣಗೊಂಡಿದೆ.