ಟರ್ಕಿ, ಫೆ 21 (DaijiworldNews/MS): ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು ಇದರ ಪರಿಣಾಮ ಮತ್ತೆ ಸಾವು - ನೋವು ಉಂಟಾಗಿರುವ ಕುರಿತು ವರದಿಯಾಗಿದೆ.
ಕೇವಲ ಎರಡು ವಾರಗಳ ಹಿಂದೆ ನಡೆದ ದುರಂತದಿಂದ ಕಂಗಾಲಾಗಿರುವ ಲಕ್ಷಾಂತರ ಜನರು ಮತ್ತೊಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ. ನಿನ್ನೆಯ ರಾತ್ರಿಯ ಭೂಕಂಪಕ್ಕೆ ಐವರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲ್ವಾರು ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದು ರಕ್ಷಣಾಕಾರ್ಯ ನಡೆಯುತ್ತಿದೆ
ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವು 6.4 ತೀವ್ರತೆಯನ್ನು ಸೂಚಿಸಿದ್ದರೆ, ಅಮೆರಿಕ ಭೂವಿಜ್ಞಾನ ಸಮೀಕ್ಷಾ ಸಂಸ್ಥೆಯು 6.3ರ ಭೂಕಂಪನವಾಗಿದೆ ಎಂದು ಹೇಳಿದೆ.
ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಕನಿಷ್ಠ 150 ಮಂದಿ ಗಾಯಗೊಂಡಿದ್ದಾರೆ. ಆದರೆ ಸಾವು ಸಂಭವಿಸದ ಬಗ್ಗೆ ದೃಢವಾದ ಮಾಹಿತಿ ಲಭ್ಯವಾಗಿಲ್ಲ.
ಫೆಬ್ರುವರಿ 6ರ ಭೂಕಂಪನದಿಂದ ತೀವ್ರವಾಗಿ ಹಾನಿಗೀಡಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಈ ವರೆಗೆ ಕನಿಷ್ಠ 46,000 ಮಂದಿ ಜೀವ ಕಳೆದುಕೊಂಡಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.