ಇಸ್ಲಾಮಾಬಾದ್, ಫೆ 24 (DaijiworldNews/DB): ಮೋದಿಯಂತಹ ನಾಯಕನಿದ್ದಿದ್ದರೆ ನಮ್ಮ ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ನಮಗೆ ಅಂತಹ ನಾಯಕನನ್ನು ನೀಡೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ..ಇದು ಪಾಕ್ ನಿವಾಸಿಗಳೇ ಹೇಳುತ್ತಿರುವ ಮಾತುಗಳು.
ಹೌದು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೀರಾ ಪ್ರಯಾಸದಾಯಕ ಸ್ಥಿತಿಯಲ್ಲಿರುವ ಪಾಕಿಸ್ತಾನದ ಜನರು ಪಾಕ್ ಯೂಟ್ಯೂಬರ್ ಸನಾ ಅಮ್ಜದ್ ಅವರ ಯೂಟ್ಯೂಬ್ ವಾಹಿನಿಗೆ ನೀಡಿದ ಪ್ರತಿಕ್ರಿಯೆಗಳು. ಬೆಲೆ ಏರಿಕೆ, ತೆರಿಗೆ ಹೆಚ್ಚಳ, ಆಹಾರ, ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಜನಸಾಮಾನ್ಯರನ್ನು ಸನಾ ಅವರು ಮಾತನಾಡಿಸಿದ್ದು, ಈ ವೇಳೆ ಪಾಕ್ ಪ್ರಜೆಯೊಬ್ಬರು ಮೋದಿಯಂತಹ ನಾಯಕನೇ ತಮಗೆ ಬೇಕು ಎಂದಿದ್ದಾರೆ.
ಭಾರತದಿಂದ ಪಾಕಿಸ್ತಾನ ವಿಭಜನೆಗೊಳ್ಳಬಾರದಿತ್ತು. ಹಾಗಾಗಿದ್ದಲ್ಲಿ ಕನಿಷ್ಠ ಅಗತ್ಯ ಸಾಮಾಗ್ರಿಗಳನ್ನಾದರೂ ನಾವು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದೆವು. ನವಾಜ್ ಷರೀಫ್, ಭುಟ್ಟೋ, ಇಮ್ರಾನ್, ಶೆಹಬಾಜ್ ಯಾರೂ ನಮಗೆ ಬೇಡ. ನಮಗೆ ಮೋದಿಯಂತ ನಾಯಕನನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಭಾರತವನ್ನು ನರೇಂದ್ರ ಮೋದಿ ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ದಿಟ್ಟ ನಾಯಕ ಇದ್ದರಷ್ಟೇ ನಮ್ಮ ದೇಶದಲ್ಲಿ ಜನಸಾಮಾನ್ಯರ ಬದುಕು ಉತ್ತಮಗೊಳ್ಳಲು ಸಾಧ್ಯ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ಮುಗ್ಗಟ್ಟು ಮಿತಿ ಮೀರಿದ್ದು, ಸ್ವತಃ ಸಚಿವರುಗಳಿಗೇ ಐಶಾರಾಮಿ ಜೀವನಕ್ಕೆ ನಿಯಂತ್ರಣ ಹೇರಲು ಆ ದೇಶ ಮುಂದಾಗಿದೆ. ಇನ್ನು ಮುಂದೆ ಪಾಕ್ನ ಯಾವುದೇ ಸಚಿವರು ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಅಲ್ಲದೆ ಪಂಚತಾರಾ ಹೊಟೇಲ್ಗಳಲ್ಲಿಯೂ ಉಳಿಯುವಂತಿಲ್ಲ. ಸದ್ಯ ಸರಳತೆ, ತ್ಯಾಗ ತೀರಾ ಅಗತ್ಯವಾಗಿದೆ ಎಂಬುದಾಗಿ ಸಚಿವ ಸಂಪುಟ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಚಿವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.