ಟರ್ಕಿ, ಫೆ 25 (DaijiworldNews/DB): ಕಳೆದ ಕೆಲ ದಿನಗಳ ಹಿಂದೆ ಸಂಭವಿಸಿದ ಭೂಕಂಪದಿಂದಾಗಿ ಉಂಟಾದ ಅಪಾರ ಸಾವು-ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಟರ್ಕಿಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಮಧ್ಯ ಟರ್ಕಿಯಲ್ಲಿ ಶನಿವಾರ 5.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಮಧ್ಯ ಟರ್ಕಿಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 5.5 ತೀವ್ರತೆ ದಾಖಲಾಗಿದೆ. ಕೇಂದ್ರ ಟರ್ಕಿಯಲ್ಲಿ ಕಳೆದ 66 ಗಂಟೆಗಳಲ್ಲಿ ಸಂಭವಿಸಿದ 37 ನೇ ಭೂಕಂಪ ಇದಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಅಪಾರ ಸಾವು-ನೋವಿಗೆ ಕಾರಣವಾಗಿತ್ತು. ಈ ಭೂಕಂಪದ ಆಘಾತದಿಂದ ಜನ ಇನ್ನೂ ಹೊರ ಬಂದಿಲ್ಲ. ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಶುಕ್ರವಾರ ರಾತ್ರಿಯವರೆಗೂ ಟರ್ಕಿಯಲ್ಲಿ 44,218 ಮಂದಿ ಮತ್ತು ಸಿರಿಯಾದಲ್ಲಿ 5,914ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿರುವುದಾಗಿ ವರದಿಯಾಗಿದೆ.