ಅಥೆನ್ಸ್, ಮಾ 01 (DaijiworldNews/DB): ರೈಲುಗಳೆರಡರ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಕನಿಷ್ಠ 26 ಮಂದಿ ಸಾವನ್ನಪ್ಪಿದ ಘಟನೆ ಗ್ರೀಸ್ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಥೆನ್ಸ್ನ ಉತ್ತರ ನಗರ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲು ಮತ್ತು ಮಧ್ಯ ಗ್ರೀಸ್ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ತುಂಬಿದ (ಕಾರ್ಗೋ) ರೈಲು ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಪ್ಯಾಸೆಂಜರ್ ರೈಲಿನ ಮೊದಲ ನಾಲ್ಕು ಬೋಗಿಗಳು ಹಳಿ ತಪ್ಪಿದ್ದು, ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಥೆಸಲಿ ಪ್ರದೇಶದ ಗವರ್ನರ್ ಕಾನ್ಸ್ಟಾಂಟಿನೋಸ್ ಅಗೋರಾಸ್ಟೋಸ್ ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಪ್ಯಾಸೆಂಜರ್ ರೈಲಿನಲ್ಲಿದ್ದ 350 ಮಂದಿ ಪ್ರಯಾಣಿಕರ ಪೈಕಿ 26 ಮಂದಿ ಮಂದಿ ದುರ್ಮರಣಕ್ಕೀಡಾಗಿದ್ದಾರೆ. 85 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 250 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.