ಬೊಲಿವಿಯಾ, ಮಾ 04 (DaijiworldNews/DB): ಬರೋಬ್ಬರಿ ಒಂದು ತಿಂಗಳ ಕಾಲ ಅಮೆಜಾನ್ ಕಾಡಿನಲ್ಲಿ ಬಾಕಿಯಾಗಿದ್ದ ವ್ಯಕ್ತಿಯೊಬ್ಬ ಎರೆ ಹುಳು ತಿಂದು, ತನ್ನದೇ ಮೂತ್ರ ಕುಡಿದು ಬದುಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜೊನಾಟನ್ ಅಕೋಸ್ಟಾ (30) ಎಂಬಾತ ಸ್ನೇಹಿತರೊಂದಿಗೆ ಜನವರಿ 25ರಂದು ಅಮೆಜಾನ್ ಕಾಡಿನಲ್ಲಿ ಭೇಟಿಯಾಡುವ ಪ್ರವಾಸ ಆರಂಭಿಸಿದ್ದರು. ಆದರೆ ಸ್ನೇಹಿತರ ಗುಂಪಿನಿಂದ ಅವರು ಅಚಾನಕ್ ಆಗಿ ಕಳೆದು ಹೋಗಿದ್ದರು. ಅವರಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ನೇಹಿತರು ವಾಪಾಸ್ ಬಂದಿದ್ದರು.
ಇತ್ತ ಜೊನಾಟನ್ ನಗರಕ್ಕೆ ಮರಳಲು ದಾರಿ ಕಾಣದೆ ಅರಣ್ಯದಲ್ಲೇ ಬಾಕಿಯಾಗಿದ್ದಾರೆ. ಮರಳುವುದಕ್ಕೆ ದಿಕ್ಕು ತೋಚದೆ, ಬರೋಬ್ಬರಿ 31 ದಿನಗಳ ಕಾಲ ಅವರು ಎರೆಹುಳು, ಕೀಟಗಳನ್ನು ತಿಂದು, ತನ್ನದೇ ಮೂತ್ರವನ್ನು ಕುಡಿದು ಬದುಕಿದ್ದಾರೆ. ಅಲ್ಲೊಂದು ಇಲ್ಲೊಂದು ಪಪ್ಪಾಯ ಸಿಗುತ್ತಿದ್ದರಿಂದ ಅದನ್ನೂ ಸೇವಿಸಿದ್ದಾರೆ.
ಇತ್ತ ಸ್ನೇಹಿತರು ಊರಿಗೆ ಮರಳಿ ಜೊನಾಟನ್ ನಾಪತ್ತೆಯಾಗಿರುವ ವಿಷಯ ತಿಳಿಸಿದ ಬಳಿಕ ಅವರಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಒಂದು ತಿಂಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೊನಾಟನ್ ಪತ್ತೆಯಾಗಿದ್ದು, ಆ ವೇಳೆಗಾಗಲೇ ಅವರು 17 ಕೆಜಿ ತೂಕ ಕಳೆದುಕೊಂಡಿದ್ದರು. ಹೀಗಾಗಿ ಕೂಡಲೇ ಕಾಡಿನಿಂದ ಅವರನ್ನು ಕರೆ ತಂದು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು.