ನ್ಯೂಯಾರ್ಕ್, ಮಾ 07 (DaijiworldNews/DB): ಅಮೆರಿಕಾದ ನ್ಯೂಯಾರ್ಕ್ನಲ್ಲಿ ವಿಮಾನ ಪತನಗೊಂಡು ಭಾರತೀಯ ಮಹಿಳೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ ಮೃತ ಮಹಿಳೆಯ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರತ ಮೂಲದ ರೀಮಾ ಗುಪ್ತಾ (63) ಮೃತಪಟ್ಟವರು. ಅವರ ಪುತ್ರಿ ರೀವಾ ಗುಪ್ತಾ (33) ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ವಿಮಾನದ ಪ್ರದರ್ಶನ ಮತ್ತು ಹಾರಾಟದಲ್ಲಿ ಅನುಭವ ಪಡೆಯುವ ಉದ್ದೇಶದಿಂದ ತಾಯಿ ಮತ್ತು ಮಗಳು ವಿಮಾನ ಹತ್ತಿದ್ದರು. ಈ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದ ವೇಳೆ 4 ಆಸನದ ಸಿಂಗಲ್ ಎಂಜಿನ್ ಪೈಪರ್ ಚೆರೋಕೀ ವಿಮಾನದ ಕಾಕ್ಪಿಟ್ ನಲ್ಲಿ ಸಣ್ಣದಾಗಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೈಲಟ್ ಯತ್ನಿಸಿದರಾದರೂ ಅದು ಅಸಾಧ್ಯವಾಗಿದೆ. ಲಾಂಗ್ ಐಲ್ಯಾಂಡ್ನಲ್ಲಿರುವ ರಿಪಬ್ಲಿಕ್ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡಿದೆ.
ವಿಮಾನ ಪತನಗೊಂಡಿದ್ದರಿಂದಾಗಿ ಅದರಲ್ಲಿದ್ದ ರೀಮಾ ಗುಪ್ತಾ ಸಾವನ್ನಪ್ಪಿದರೆ ಮಗಳು ರೀವಾ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಗಾಯಾಳುವಾಗಿರುವ 23 ವರ್ಷದ ಪೈಲಟ್ ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಘಟನೆಯ ತನಿಖೆ ನಡೆಸುತ್ತಿವೆ.