ಕಾಠ್ಮಂಡು, ಮಾ 11 (DaijiworldNews/DB): ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೋಡ್ಕಾ ಬಾಟಲಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮುಖಾಂತರ ಹೊರ ತೆಗೆದ ಘಟನೆ ನೇಪಾಳದಲ್ಲಿ ನಡೆದಿದೆ.
ಮದ್ಯಪಾನಿಯಾಗಿದ್ದ ರೌತಾಹರಿ ಜಿಲ್ಲೆಯ ನುರ್ಸಾದ್ ಮನ್ಸೂರಿ ಎಂಬಾತ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೀಗಾಗಿ ಈತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ವಿಚಿತ್ರ ವಸ್ತುವೊಂದು ಆತನ ಹೊಟ್ಟೆ ಸೇರಿರುವುದು ಗೊತ್ತಾಗಿದೆ. ಹೀಗಾಗಿ ಆತನನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಯಿತು. ಈ ವೇಳೆ ಆತನ ಹೊಟ್ಟೆಯಲ್ಲಿ ವೋಡ್ಕಾ ಬಾಟಲಿ ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ.
ನಂತರ ಬಾಟಲಿಯನ್ನು ವೈದ್ಯರು ಸುರಕ್ಷಿತವಾಗಿ ಹೊರ ತೆಗೆದಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.