ಶ್ರೀಲಂಕಾ, ಮಾ 12 (DaijiworldNews/DB): ತಮಿಳುನಾಡಿನ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ಭಾನುವಾರ ನಡೆದಿದೆ.
ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಣಂ ಕರಾವಳಿ ಗ್ರಾಮದ ಮೀನುಗಾರರಾದ ಎಲ್. ಅರೋಕಿಯ ರಾಜ್ (54), ಎ. ಅಶೋಕ್ (28), ಎ. ಕರುಪ್ಪು (22) ಮತ್ತು ಎಸ್.ಶಕ್ತಿ (21) ಬಂಧಿಸಲ್ಪಟ್ಟವರು. ಭಾನುವಾರ ಮುಂಜಾನೆ 4.30ಕ್ಕೆ ಶ್ರೀಲಂಕಾ ನೌಕಾಪಡೆ ಇವರನ್ನು ಬಂಧಿಸಿತ್ತು. ಬಂಧಿತರನ್ನು ಪರುಥಿತುರೈನಲ್ಲಿರುವ ಶ್ರೀಲಂಕಾ ನೌಕಾ ನೆಲೆಗೆ ಹೆಚ್ಚಿನ ವಿಚಾರಣೆಗಾಗಿ ಕೊಂಡೊಯ್ಯಲಾಗಿದೆ.
ನಾಲ್ವರು ಮೀನುಗಾರರು ಶನಿವಾರ ಬೆಳಗ್ಗೆ ಕೊಟ್ಟೈಪಟ್ಟಣಂ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಅಲೈ ತೀವು ಬಳಿ ಸುಮಾರು 30 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಇವರೆಲ್ಲರೂ ಮೀನುಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ ಅವರನ್ನು ಶ್ರೀಲಂಕಾ ನೌಕಾಪಡೆ ತಡೆದಿದ್ದು, ಶ್ರೀಲಂಕಾ ಜಲ ಗಡಿಗೆ ಅಕ್ರಮ ಪ್ರವೇಶ ಆರೋಪದ ಮೇಲೆ ನಾಲ್ವರನ್ನೂ ಬಂಧಿಸಿದೆ ಎಂದು ತಿಳಿದು ಬಂದಿದೆ.