ಬ್ರಿಟನ್, ಮಾ 24 (DaijiworldNews/MS): ಗೌಪ್ಯತೆ ಮತ್ತು ಸೈಬರ್ ಸುರಕ್ಷತೆಯ ದೃಷ್ಟಿಯಿಂದ ತನ್ನ ನೆಟ್ ವರ್ಕ್ ನಲ್ಲಿರುವ ಎಲ್ಲಾ ಸಾಧನಗಳಲ್ಲಿ ಟಿಕ್ಟಾಕ್ ನ್ನು ನಿರ್ಬಂಧಿಸಲು ಬ್ರಿಟನ್ ಸಂಸತ್ತು ಸೂಚಿಸಿದೆ. ಹೀಗಾಗಿ ಭದ್ರತಾ ಕಾರಣದಿಂದ ಮೇಲೆ ಚೀನಾದ ಒಡೆತನದ ವೀಡಿಯೊ ಅಪ್ಲಿಕೇಶನ್ ಟಿಕ್ ಟಾಕನ್ನು ನಿರ್ಬಂಧಿಸುತ್ತಿರುವ ದೇಶಗಳ ಪಟ್ಟಿಗೆ ಬ್ರಿಟನ್ ಹೊಸ ಸೇರ್ಪಡೆಯಾಗಿದೆ.
ಸರ್ಕಾರಿ ಸಾಧನಗಳಿಂದ ಟಿಕ್ ಟಾಕ್ ಅನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಅನುಸರಿಸಿ, ಹೌಸ್ ಆಫ್ ಕಾಮನ್ಸ್ ಮತ್ತು ಲಾರ್ಡ್ಸ್ ಎರಡೂ ಆಯೋಗಗಳು ಟಿಕ್ಟಾಕ್ ಅನ್ನು ಎಲ್ಲಾ ಸಂಸದೀಯ ಸಾಧನಗಳು ಮತ್ತು ವ್ಯಾಪಕ ಸಂಸದೀಯ ನೆಟ್ವರ್ಕ್ನಿಂದ ನಿರ್ಬಂಧಿಸಲು ನಿರ್ಧರಿಸಿವೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್, ಕೆನಡಾ, ಬೆಲ್ಜಿಯಂ ಮತ್ತು ಯುರೋಪಿಯನ್ ಕಮಿಷನ್ ಈಗಾಗಲೇ ಅಧಿಕೃತ ಸಾಧನಗಳಿಂದ ಅಪ್ಲಿಕೇಶನ್ ಅನ್ನು ನಿಷೇಧಿಸಿವೆ.
ವಿವಿಧ ವರದಿಗಳ ಪ್ರಕಾರ, ಜನಪ್ರಿಯ ಟಿಕ್ಟಾಕ್ ಅಪ್ಲಿಕೇಶನ್ ತನ್ನ ಬಳಕೆದಾರರ ವಯಸ್ಸು, ಸ್ಥಳ, ಸಾಧನ ಮತ್ತು ಅವರ ಟೈಪಿಂಗ್ ಮಾದರಿಗಳನ್ನು ಒಳಗೊಂಡಂತೆ ಸಾಕಷ್ಟು ಡೇಟಾವನ್ನು ಸಂಗ್ರಹಿಸುತ್ತದೆ. ಹೆಚ್ಚುವರಿಯಾಗಿ, ಅದರ ಕುಕೀಗಳು ವೆಬ್ನಲ್ಲಿನ ಇತರ ವೆಬ್ಸೈಟ್ಗಳಲ್ಲಿ ಬಳಕೆದಾರರ ಚಟುವಟಿಕೆಯ ಮೇಲೂ ಕಣ್ಣಿಡುತ್ತದೆ ಎಂಬ ಆರೋಪ ಕೇಳಿಬಂದಿದೆ.
ಏತನ್ಮಧ್ಯೆ, ಟಿಕ್ಟಾಕ್ ಚೀನಾ ಸರ್ಕಾರಕ್ಕೆ ಬಳಕೆದಾರರ ಡೇಟಾವನ್ನು ಒದಗಿಸುತ್ತದೆ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.