ವಾಷಿಂಗ್ಟನ್, ಮಾ 25 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ ನಡೆ ಗಾಂಧಿ ತತ್ವಕ್ಕೆ ಮಾಡಿದ ದ್ರೋಹ ಎಂದು ಭಾರತ ಮೂಲದ ಅಮೆರಿಕದ ಕಾಂಗ್ರೆಸ್ ಸದಸ್ಯ ರೋ ಖನ್ನಾ ಹೇಳಿದ್ದಾರೆ.
ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಸಿಲಿಕಾನ್ ವ್ಯಾಲಿಯನ್ನು ಪ್ರತಿನಿಧಿಸುತ್ತಿರುವ ಖನ್ನಾ ಅವರು ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿ, ರಾಹುಲ್ರ ಸಂಸತ್ ಸದಸ್ಯತ್ವ ರದ್ದತಿಯಿಂದ ಗಾಂಧಿ ತತ್ವಗಳಿಗೆ ಅವಮಾನ ಮಾಡಿದಂತಾಗಿದೆ. ಅಲ್ಲದೆ ಇದು ಭಾರತದ ಮೌಲ್ಯಗಳ ಮೇಲೆ ಮಾಡಲಾದ ದ್ರೋಹವೂ ಆಗಿದೆ ಎಂದಿದ್ದಾರೆ.
ನನ್ನ ಅಜ್ಜ (ಮಹಾತ್ಮ ಗಾಂಧಿ) ಹಲವು ವರ್ಷ ಜೈಲಲ್ಲಿದ್ದರು. ತ್ಯಾಗವನ್ನೂ ಮಾಡಿದ್ದರು. ಅವರ ಈ ಎಲ್ಲಾ ತ್ಯಾಗವು ಭಾರತದಲ್ಲಿ ಈ ರೀತಿಯ ದಿನಗಳಿಗಾಗಿ ಅಲ್ಲ. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಕರಾಳ ದಿನ ಎಂದಿದ್ದಾರೆ.
ಭಾರತೀಯರ ವಾಕ್ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿರುವುದು ರಾಹುಲ್ ಗಾಂಧಿಯವರ ಅನರ್ಹತೆ ಮೂಲಕ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್ ಅನರ್ಹತೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಏಕೆಂದರೆ ಭಾರತದ ಪ್ರಜಾಪ್ರಭುತ್ವದ ಪರವಾಗಿ ತೀರ್ಮಾನಿಸುವ ಶಕ್ತಿ ಅವರಿಗೆ ಇದೆ ಎಂದು ಒತ್ತಾಯಿಸಿದ್ದಾರೆ.