ವಾಷಿಂಗ್ಟನ್, ಮಾ 28 (DaijiworldNews/DB): ಭಾರತದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಚಾರವಾಗಿ ಭಾರತದ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಯುನೈಟೆಡ್ ಸ್ಟೇಟ್ಸ್ ವೀಕ್ಷಿಸುತ್ತಿದೆ ಎಂದು ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಪ್ರಿನ್ಸಿಪಲ್ ಡೆಪ್ಯುಟಿ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯೊಂದರಲ್ಲಿ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಉತ್ತರಿಸಿ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ, ಬದ್ಧತೆಯ ಮೇಲೆ ಭಾರತ ಸರ್ಕಾರದೊಂದಿಗೆ ಅಮೆರಿಕ ತೊಡಗಿಸಿಕೊಂಡಿದೆ ಎಂದಿದ್ದಾರೆ.
ಕಾನೂನು ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡುವುದು ಯಾವುದೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವುದು ಮತ್ತು ಮಾನವ ಹಕ್ಕುಗಳ ರಕ್ಷಣೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಲಪಡಿಸಲು ತೋರಿಸುವ ಬದ್ದತೆಯನ್ನು ಮುಂದುವರಿಸುತ್ತೇವೆ ಎಂದರು.
ಅಮೆರಿಕಾವು ಭಾರತ ಅಥವಾ ರಾಹುಲ್ ಗಾಂಧಿಯವರೊಂದಿಗೆ ಕೈ ಜೋಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ದಿಷ್ಟವಾಗಿ ನಾವು ಇಂತಹ ಒಳಗೊಳ್ಳುವಿಕೆಯನ್ನು ತೋರ್ಪಡಿಸುವುದಿಲ್ಲ ಎಂದು ತಿಳಿಸಿದರು.