ವಾಷಿಂಗ್ಟನ್, ಮಾ 29 (DaijiworldNews/DB): ಸರ್ಕಾರಿ ವಲಸಿಗರ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಷಿ ಕನಿಷ್ಠ 40 ಮಂದಿ ಸಜೀವ ದಹನವಾದ ಘಟನೆ ಮೆಕ್ಸಿಕೋದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೆಕ್ಸಿಕೋದ ಗಡಿ ನಗರವಾದ ಸಿಯುಡಾಡ್ ಜುವಾರೆಜ್ನಲ್ಲಿ ಘಟನೆ ನಡೆದಿದೆ. ಮೆಕ್ಸಿಕೋದ ರಾಷ್ಟ್ರೀಯ ವಲಸೆ ಸಂಸ್ಥೆಯಿಂದ ನಡೆಸಲ್ಪಡುವ ವಲಸಿಗರ ಕೇಂದ್ರ ಇದಾಗಿದ್ದು, ಘಟನೆಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದರೆ, 28 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಗ್ವಾಟೆಮಾಲಾ, ಹೊಂಡುರಾಸ್, ಎಲ್ ಸಾಲ್ವಡಾರ್, ವೆನೆಜುವೆಲಾ, ಕೊಲಂಬಿಯಾ ಮತ್ತು ಈಕ್ವೆಡಾರ್ ದೇಶದ ಪ್ರಜೆಗಳು ಎನ್ನಲಾಗಿದೆ.
ಇನ್ನು ತಮ್ಮನ್ನು ಗಡಿಪಾರು ಮಾಡಬಹುದು ಎಂಬ ಭಯದಿಂದ ಕೇಂದ್ರದಲ್ಲಿನ ಹಾಸಿಗೆಗಳನ್ನು ವಲಸಿಗರು ಸುಟ್ಟು ಹಾಕಿ ಪ್ರತಿಭಟಿಸಿದ್ದಾರೆ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬಂದಿ ಓಡಿ ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಣ್ಣ ಸೆಲ್ನಲ್ಲಿ ತಮ್ಮನ್ನು ಹಾಕಲಾಗಿದ್ದು, ಕುಡಿಯುವುದಕ್ಕೆ ನೀರೂ ಸಿಗುವುದಿಲ್ಲ ಎಂಬ ಕಾರಣಕ್ಕೆ ವಲಸಿಗರು ಪ್ರತಿಭಟನೆ ನಡೆಸಿದ್ದರು. ಒಟ್ಟು 68 ಪುರುಷರು ಇಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.