ಮ್ಯಾನ್ಮಾರ್, ಏ 12 (DaijiworldNews/MS): ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಈ ದಾಳಿಯನ್ನು ಅಮೇರಿಕಾ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿದೆ.
ಮಿಲಿಟರಿ ಆಡಳಿತದ ವಿರೋಧಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು ಎಂಬ ಕಾರಣಕ್ಕೆ ಸೇನೆಯು ಮನಬಂದಂತೆ ದಾಳಿ ನಡೆಸಿದೆ.
ಫೆಬ್ರವರಿ 2021 ರಲ್ಲಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಸೇನೆಯು ಪದಚ್ಯುತಗೊಳಿಸಿ, ಅಧಿಕಾರ ಹಿಡಿದಿತ್ತು. ಫೆಬ್ರವರಿ 2021ರ ದಂಗೆಯ ನಂತರ ಮ್ಯಾನ್ಮಾರ್ ಭೀಕರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ.
ಸಾಗಯಿಂಗ್ ಪ್ರದೇಶದ ಕಣಬಾಲು ಟೌನ್ಶಿಪ್ನಲ್ಲಿರುವ ಪಜಿಗಿ ಗ್ರಾಮದ ಹೊರಗೆ ದೇಶದ ವಿರೋಧ ಪಕ್ಷದ ಸ್ಥಳೀಯ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಬೆಳಿಗ್ಗೆ 8 ಗಂಟೆಗೆ ನೆರೆದಿದ್ದ ಜನ ಸಮೂಹದ ಮೇಲೆ ಫೈಟರ್ ಜೆಟ್ ಬಾಂಬ್ ಸ್ಫೋಟಿಸಿತು.ಇದಾಗಿ ಸುಮಾರು ಅರ್ಧ ಗಂಟೆಯ ನಂತರ ಹೆಲಿಕಾಪ್ಟರ್ನಿಂದ ಗುಂಡು ಹಾರಿಸಲಾಯಿತು ಎಂದು ವರದಿಯಾಗಿದೆ.