ನೈರೋಬಿ, ಏ 15 (DaijiworldNews/HR): ಕೀನ್ಯಾದಲ್ಲಿ ಕಳೆದ ವಾರ ಮಹಿಳಾ ಮುಕ್ತ ಚೆಸ್ ಪಂದ್ಯಾವಳಿ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಬುರ್ಖಾ ಹಾಕಿಕೊಂಡು ಮಹಿಳೆಯಂತೆ ವ್ಯಕ್ತಿಯೊಬ್ಬ ಸ್ಪರ್ಧಾಳಾಗಿ ಭಾಗವಹಿಸಿ ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ.
ಕೀನ್ಯಾ ಮೂಲದ ಸ್ಟಾನ್ಲಿ ಒಮೊಂಡಿ ಎಂಬ ವ್ಯಕ್ತಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದ್ದು, ಹಣಗಳಿಸುವ ಉದ್ದೇಶದಿಂದ ನೈರೋಬಿಯಲ್ಲಿ ನಡೆದ ಮಹಿಳಾ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾನೆ.
ಇನ್ನು ತನ್ನ ಪರಿಚಯ ಯಾರಿಗೂ ತಿಳಿಯಬಾರದೆನ್ನುವ ಕಾರಣದಿಂದ ಬುರ್ಖಾವನ್ನು ಧರಿಸಿಕೊಂಡು, ಕನ್ನಡಕವೊಂದನ್ನು ಹಾಕಿಕೊಂಡು ತನ್ನ ಹೆಸರು ಮಿಲಿಸೆಂಟ್ ಅವರ್ ಎಂದು ರಿಜಿಸ್ಟಾರ್ ಮಾಡಿಸಿ, ಮಹಿಳಾ ಸ್ಪರ್ಧಿಗಳೊಂದಿಗೆ ಚೆಸ್ ನ್ನು ಆಡಿದ್ದಾನೆ.
ಈತ ಸತತ ಗೆಲುವು ಸಾಧಿಸಿಕೊಂಡು ಹೋಗುತ್ತಿದ್ದರಿಂದ ಸಂಶಯಗೊಂಡ ಪಂದ್ಯಾಕೂಟದ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ. ನಾಲ್ಕನೇ ಸುತ್ತಿನ ಬಳಿಕ ಖಾಸಗಿ ಕೋಣೆಗೆ ಕರೆದುಕೊಂಡು ಬುರ್ಖಾ ತೆಗೆಯುವಂತೆ ಹೇಳಿದ್ದಾರೆ. ಆಗ ಸ್ಟಾನ್ಲಿ ಒಮೊಂಡಿನಿಯ ನಿಜವಾದ ಮುಖವಾಡ ಬಯಲಾಗಿದೆ.
ನಾನೊಬ್ಬ ಯೂನಿವರ್ಸಿಟಿ ವಿದ್ಯಾರ್ಥಿ ಹಾಗೂ ಚೆಸ್ ಆಟಗಾರ. ನನಗೆ ಹಣಕಾಸಿನ ತೀರ ಅಗತ್ಯಯಿದ್ದ ಕಾರಣ ಈ ರೀತಿ ಮಾಡಿದೆ. ನನ್ನ ತಪ್ಪಿಗೆ ನೀಡುವ ಶಿಕ್ಷೆಯನ್ನು ಸ್ವೀಕರಿಸಲು ಸಿದ್ದವೆಂದು ಹೇಳಿರುವುದಾಗಿ ವರದಿಯಾಗಿದೆ.